ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭ ಸರಕಾರಿ ಶಾಲೆಯಲ್ಲಿ ಏರಿಕೆಯಾಗಿದ್ದ ದಾಖಲಾತಿ ಪ್ರಮಾಣ ಈಗ ಇಳಿಕೆಯಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ (ಎಎಸ್‌ಇಆರ್) ಹೇಳಿದೆ.
ಸರಕಾರಿ ಶಾಲೆಗಳಲ್ಲಿ 6-14 ವರ್ಷದ ಮಕ್ಕಳ ದಾಖಲಾತಿ ಪ್ರಮಾಣ ಈಗ 2018ರಲ್ಲಿ ಇದ್ದ ಮಟ್ಟಕ್ಕೆ ಇಳಿದಿದೆ ಎಂದು ಅದು ಹೇಳಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಕಲಿಕೆಯ ನಷ್ಟವನ್ನು ತುಂಬಲಾಗಿದೆ. ಕೆಲವು ಪ್ರಕರಣಗಳಲ್ಲಿ ಈಗಿನ ಕಲಿಕಾ ಮಟ್ಟವು ಹಿಂದಿನ ಕಲಿಕಾ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ಅದು ವರದಿ ತಿಳಿಸಿದೆ.
14-16 ಪ್ರಾಯ ಗುಂಪಿನ ಶೇ. 82ಕ್ಕಿಂತ ಹೆಚ್ಚು ಮಕ್ಕಳು ಸ್ಮಾರ್ಟ್ ಫೋನ್‌ಗಳನ್ನು ಹೇಗೆ ಬಳಸುವುದು ಎಂದು ತಿಳಿದಿದ್ದಾರೆ. ಆದರೆ, ಅವರಲ್ಲಿ ಕೇವಲ ಶೇ. 57 ಮಕ್ಕಳು ಮಾತ್ರ ಅದನ್ನು ಶಿಕ್ಷಣದ ಉದ್ದೇಶಕ್ಕೆ ಬಳಸುತ್ತಾರೆ ಎಂದು ಅದು ಹೇಳಿದೆ.
‘‘ಕೋವಿಡ್-19 ಸಂದರ್ಭ ಸರಕಾರಿ ಶಾಲೆಗಳಲ್ಲಿ ಏರಿಕೆಯಾಗಿದ್ದ ದಾಖಲಾತಿ ಪ್ರಮಾಣ ಈಗ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶಗಳ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ 2006ರಿಂದ ಕ್ರಮೇಣ ಏರಿಕೆಯಾಗಿದೆ. ಖಾಸಗಿ ಶಾಲೆಗಳಲ್ಲಿ ದಾಖಲಾದ 6-14 ವರ್ಷದ ಮಕ್ಕಳ ಪ್ರಮಾಣ 2006ರಲ್ಲಿ ಶೇ. 18.7 ಇದ್ದುದು, 2014ರಲ್ಲಿ ಶೇ. 30.8ಕ್ಕೆ ಏರಿಕೆಯಾಗಿದೆ. 2018ರಲ್ಲಿ ಅದೇ ಮಟ್ಟದಲ್ಲಿ ಉಳಿದಿದೆ’’ ಎಂದು ಅದು ತಿಳಿಸಿದೆ.
‘‘ಸಾಂಕ್ರಾಮಿಕ ರೋಗದ ವರ್ಷಗಳಲ್ಲಿ ಸರಕಾರಿ ಶಾಲೆಗಳ ದಾಖಲಾತಿಯಲ್ಲಿ ದೊಡ್ಡ ಜಿಗಿತ ಕಂಡು ಬಂತು. ಸರಕಾರಿ ಶಾಲೆಗಳಲ್ಲಿ ದಾಖಲಾದ 6-14 ವರ್ಷದ ಮಕ್ಕಳ ಪ್ರಮಾಣ 2018ರಲ್ಲಿ 65.5 ಇದ್ದುದು 2022ರಲ್ಲಿ 72.9ಕ್ಕೆ ಏರಿಕೆಯಾಯಿತು. ಆದರೆ, ಅನಂತರದ ವರ್ಷಗಳಲ್ಲಿ ದಾಖಲಾತಿ ಪ್ರಮಾಣ ಕುಸಿದಿದ್ದು, 2024ರಲ್ಲಿ ಶೇ. 66.8ಕ್ಕೆ ಇಳಿಯಿತು. ದಾಖಲಾತಿ ಪ್ರಮಾಣ 2018ರಲ್ಲಿ ಇದ್ದ ಮಟ್ಟಕ್ಕೆ ಸಂಪೂರ್ಣವಾಗಿ ಮರಳಿದೆ. ಬೇರೆ ಬೇರೆ ಕ್ಷೇತ್ರಗಳ ಆರ್ಥಿಕತೆಯೂ ಮತ್ತೆ ಹಳಿಗೆ ಬಂದಿರುವುದನ್ನು ನೋಡಿದಾಗ ಶೈಕ್ಷಣಿಕ ರಂಗದಲ್ಲಿನ ಬದಲಾವಣೆ ಅಚ್ಚರಿ ಮೂಡಿಸುವುದಿಲ್ಲ’’ ಎಂದು ವರದಿ ಹೇಳಿದೆ.
ರಾಷ್ಟ್ರವ್ಯಾಪಿ ಗ್ರಾಮೀಣ ಕುಟುಂಬಗಳ ಸಮೀಕ್ಷೆಯಾಗಿರುವ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ (ಎಎಸ್‌ಇಆರ್) ವರದಿ-2024 ದೇಶದ 605 ಗ್ರಾಮೀಣ ಜಿಲ್ಲೆಗಳ 17,997 ಗ್ರಾಮಗಳ 6,49,491 ಮಕ್ಕಳ ಸಮೀಕ್ಷೆ ನಡೆಸಿದೆ.