ಗಾಂಧಿನಗರ : ಗುಜರಾತ್ ನ ಜಾಮ್ ನಗರದಲ್ಲಿ ಕಾಂಗೋ ಜ್ವರಕ್ಕೆ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.
ಕಾಂಗೋ ಜ್ವರವನ್ನು ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರ(Crimean-Congo Hemorrhagic Fever) (CCHF) ಎಂದು ಕರೆಯಲಾಗುತ್ತದೆ. ಇದು ಕಳೆದ ಐದು ವರ್ಷಗಳಲ್ಲಿ ಕಾಂಗೋ ಜ್ವರದಿಂದ ಸಂಭವಿಸಿದ ಮೊದಲ ಸಾವು ಇದು ಎಂದು ವೈದ್ಯರು ತಿಳಿಸಿದ್ದಾರೆ.
ಮೋಹನ್ ಬಾಯ್(51) ಮೃತರು. ಜಾನುವಾರು ಸಾಕಣೆದಾರರಾಗಿದ್ದ ಮೋಹನ್ ಬಾಯ್ ಅವರನ್ನು ಜನವರಿ 21ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ವೇಳೆ ಅವರಿಗೆ ಕಾಂಗೋ ಜ್ವರ ಇರುವುದು ಪತ್ತೆಯಾಗಿದೆ.
ಈ ಕುರಿತು ಜಾಮ್ ನಗರ ವೈದ್ಯಕೀಯ ಕಾಲೇಜಿನ ಹೆಚ್ಚುವರಿ ಡೀನ್ ಡಾ.ಎಸ್.ಎಸ್. ಚಟರ್ಜಿ ಮಾಹಿತಿಯನ್ನು ನೀಡಿದ್ದು, ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ವರದಿಯಾದ ಮೊದಲ ಪ್ರಕರಣ ಇದಾಗಿದೆ. ಮೋಹನ್ ಭಾಯ್ ಅವರ ಸಾವಿನ ನಂತರ ಅವರ ನಿವಾಸದ ಬಳಿ ಆರೋಗ್ಯ ಇಲಾಖೆ ಕಣ್ಗಾವಲು ಹೆಚ್ಚಿಸಿದೆ. ಹೆಚ್ಚಿನ ಪ್ರಕರಣಗಳನ್ನು ತಡೆಗಟ್ಟಲು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಅಧಿಕಾರಿಗಳು ಅವರ ಕುಟುಂಬಕ್ಕೆ ಸಲಹೆ ನೀಡಿದ್ದಾರೆ ಎಂದು ಜಾಮ್ನಗರ ವೈದ್ಯಕೀಯ ಕಾಲೇಜಿನ ಹೆಚ್ಚುವರಿ ಡೀನ್ ಡಾ. ಎಸ್.ಎಸ್. ಚಟರ್ಜಿ ಹೇಳಿದ್ದಾರೆ.
ಈ ವೈರಸ್ ಸೋಂಕಿಗೆ ಒಳಗಾದ ರೋಗಿಗಳಲ್ಲಿ ಜ್ವರ, ಸ್ನಾಯು ನೋವು, ತಲೆನೋವು ಮತ್ತು ತಲೆಸುತ್ತು ಕಂಡು ಬರುತ್ತದೆ. ಸೋಂಕಿನ ತಗುಲಿದ ಎರಡರಿಂದ ನಾಲ್ಕು ದಿನಗಳ ನಂತರ ನಿದ್ರಾಹೀನತೆ, ಖಿನ್ನತೆ ಮತ್ತು ಹೊಟ್ಟೆ ನೋವು ಮತ್ತು ಬಾಯಿ, ಗಂಟಲು ಮತ್ತು ಚರ್ಮದ ಮೇಲೆ ದದ್ದುಗಳು ಸಹ ಕಂಡುಬರುತ್ತವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ಕಾಂಗೋ ಜ್ವರ ವೈರಸ್ ತೀವ್ರವಾದಾಗ ರಕ್ತಸ್ರಾವ ಏಕಾಏಕಿ ಉಂಟಾಗುತ್ತದೆ. ಇದು ಶೇಕಡಾ 40ರಷ್ಟು ಮರಣ ಪ್ರಮಾಣವನ್ನು ಹೊಂದಿದೆ ಮತ್ತು ಪ್ರಸ್ತುತ ಇದಕ್ಕೆ ಯಾವುದೇ ಲಸಿಕೆ ಇಲ್ಲ.
ಈ ವೈರಸ್ ಸಾಕು ಪ್ರಾಣಿಗಳಿಂದ ಜನರಿಗೆ ಹರಡುತ್ತದೆ. ಈ ವೈರಸ್ ಸೋಂಕಿತ ವ್ಯಕ್ತಿಗಳ ರಕ್ತ, ಅಂಗಗಳು ಅಥವಾ ಇತರ ದೈಹಿಕ ದ್ರವಗಳ ನಿಕಟ ಸಂಪರ್ಕದಿಂದ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ.