ಜೋಧ್ ಪುರ: ರಾಜಸ್ಥಾನದ ಜೋಧ್ ಪುರದಲ್ಲಿ ಇಂಡಿಗೋ ವಿಮಾನ ಟೇಕಾಫ್ ಆಗುವ ಕೆಲ ನಿಮಿಷಗಳ ಮೊದಲು ಪ್ರಯಾಣಿಕನೋರ್ವ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದು, ಆತನನ್ನು ಬಂಧಿಸಲಾಗಿದೆ.
ರಾಜಸ್ಥಾನದ ಜೋಧ್ ಪುರ ವಿಮಾನ ನಿಲ್ಧಾಣದಲ್ಲಿ ಇಂಡಿಗೋ ವಿಮಾನ ಬೆಂಗಳೂರಿಗೆ ಹೊರಡಲು ಸಿದ್ಧವಾಗಿತ್ತು. ಎಲ್ಲಾ ಪ್ರಯಾಣಿಕರು ವಿಮಾನ ಹತ್ತಿದರು. ವಿಮಾನ ಟೇಕ್-ಆಫ್ ಬೆಳಿಗ್ಗೆ 10:10ಕ್ಕೆ ನಿಗದಿಯಾಗಿತ್ತು. ಆದರೆ, ಇದ್ದಕ್ಕಿದ್ದಂತೆ, ಓರ್ವ ಪ್ರಯಾಣಿಕ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದಾನೆ. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ತುರ್ತು ನಿರ್ಗಮನ ದ್ವಾರವನ್ನು ತೆರೆದ ಪ್ರಯಾಣಿಕನನ್ನು ಬಂಧಿಸಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ಗೆ ಹಸ್ತಾಂತರಿಸಲಾಗಿದೆ.
ಸಿರಾಜ್ ಕಿದ್ವಾಯ್ ಎಂಬಾತ ಬಂಧಿತ ಆರೋಪಿ. ತನಿಖೆಯ ವೇಳೆ ಈತ ತಾನು ಆಕಸ್ಮಿಕವಾಗಿ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದೇನೆ ಎಂದು ಹೇಳಿದ್ದಾನೆ. ತುರ್ತು ನಿರ್ಗಮನ ದ್ವಾರ ತೆರೆದ ತಕ್ಷಣ ಪೈಲಟ್ ಗೆ ನೇರ ಸಂದೇಶವನ್ನು ಕಳುಹಿಸಲಾಗಿದೆ. ನಂತರ ಭದ್ರತಾ ಅಧಿಕಾರಿಗಳು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.
ಇಂಡಿಗೋ ವಿಮಾನಯಾನ ಸಂಸ್ಥೆ ಈ ಕುರಿತು ಪ್ರತಿಕ್ರಿಯಿಸಿದ್ದು, ಜೋಧ್ ಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ 6E 6033 ವಿಮಾನದಲ್ಲಿ ಓರ್ವ ಪ್ರಯಾಣಿಕ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದಾನೆ. ತಕ್ಷಣ ಪ್ರಯಾಣಿಕನನ್ನು ಕೆಳಗಿಳಿಸಿ ತನಿಖೆಗಾಗಿ ಕಾನೂನು ಜಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ನಮ್ಮ ಎಲ್ಲಾ ಸೇವೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಹೇಳಿದ್ದಾರೆ.