ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ಬಧಾಲ್ ಗ್ರಾಮವನ್ನು ಆಡಳಿತ ಧಾರಕ ವಲಯ (ಕಂಟೈನ್ಮೆಂಟ್ ರೆನ್) ಎಂದು ಬುಧವಾರ ಘೋಷಿಸಿದೆ.
ಕಳೆದ 50 ದಿನಗಳಲ್ಲಿ ನಿಗೂಢ ಕಾಯಿಲೆಗೆ ಮೂರು ಕುಟುಂಬಗಳ 13 ಮಕ್ಕಳು ಸೇರಿದಂತೆ 17 ಮಂದಿ ಸಾವನ್ನಪ್ಪಿದ ಬಳಿಕ ಅಲ್ಲಿ ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕವಾಗಿ ಸಭೆ ಸೇರುವುದಕ್ಕೆ ನಿಷೇಧ ವಿಧಿಸಲಾಗಿದೆ.
ಸೋಂಕು ಇನ್ನಷ್ಟು ಹರಡದಂತೆ ತಡೆಯುವ ಧಾರಕ (ಕಂಟೈನ್ಮೆಂಟ್ ರೆನ್) ಕಾರ್ಯತಂತ್ರ ಹಾಗೂ ಕಣ್ಗಾವಲು ಕ್ರಮದ ಭಾಗವಾಗಿ ರಾಜೌರಿ ಜಿಲ್ಲಾಧಿಕಾರಿ ಬಧಾಲ್ ಗ್ರಾಮದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)ಯ ಸೆಕ್ಷನ್ 163ರ ಜಾರಿಗೊಳಿಸಿದ್ದಾರೆ.
ಆದೇಶ ಜಾರಿಗೊಳಿಸಿರುವ ರಾಜೌರಿಯ ಜಿಲ್ಲಾಧಿಕಾರಿ ‘‘ಸಾವು ಸಂಭವಿಸಿದ ಎಲ್ಲಾ ಕುಟುಂಬಗಳನ್ನು ಧಾರಕ ವಲಯ (ಕಂಟೈನ್ಮೆಂಟ್ ರೆನ್) – 1 ಎಂದು ಘೋಷಿಸಬೇಕು. ಈ ಮನೆಗಳಿಗೆ ಬೀಗ ಮುದ್ರೆ ಹಾಕಬೇಕು. ಅಲ್ಲದೆ, ನಿಯೋಜಿತ ಅಧಿಕಾರಿಗಳಿಂದ ಅನುಮತಿ ಪಡೆಯದ ಹೊರತು ಕುಟುಂಬದ ಸದಸ್ಯರು ಸೇರಿದಂತೆ ಎಲ್ಲಾ ವ್ಯಕ್ತಿಗಳಿಗೆ ಈ ಮನೆಗಳಿಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಬೇಕು’’ ಎಂದಿದ್ದಾರೆ.
ಸೋಂಕಿತ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿದ್ದರೆಂದು ಗುರುತಿಸಲಾದ ಎಲ್ಲಾ ಕುಟುಂಬಗಳನ್ನು ಧಾರಕ ವಲಯ (ಕಂಟೈನ್ಮೆಂಟ್ ರೆನ್) -2 ಎಂದು ಘೋಷಿಸಬೇಕು. ನಿರಂತರ ಆರೋಗ್ಯ ಮೇಲ್ವಿಚಾರಣೆಗಾಗಿ ಈ ಕುಟುಂಬಗಳ ಸದಸ್ಯರನ್ನು ಜಿಎಂಸಿ ರಾಜೌರಿಗೆ ಕೂಡಲೇ ಸ್ಥಳಾಂತರಿಸುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಬಧಾಲ್ ಗ್ರಾಮದ ಎಲ್ಲಾ ಮನೆಗಳನ್ನು ಧಾರಕ ವಲಯ (ಕಂಟೈನ್ಮೆಂಟ್ ರೆನ್) – 3 ಎಂದು ಘೋಷಿಸಬೇಕು. ಈ ವಲಯದಲ್ಲಿ ಆಹಾರ ಸೇವನೆಯ ಕುರಿತು ನಿರಂತರ ನಿಗಾ ಇರಿಸಲು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಬದಲಾಯಿಸಿ ನೀಡಲಾದ ಆಹಾರ ಸೇವನೆ ಅನುಸರಣೆಯ ಮೇಲ್ವಿಚಾರಣೆ ನಡೆಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆದೇಶ ಹೇಳಿದೆ.