ಹೊಸದಿಲ್ಲಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ತನ್ನ ಎಲ್ಲ ಪ್ರಜೆಗಳನ್ನು ಗುರುತಿಸಲು ಮತ್ತು ಅವರನ್ನು ವಾಪಸ್ ಕರೆಸಿಕೊಳ್ಳಲು ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಕೈಜೋಡಿಸಲು ಭಾರತ ಸರಕಾರವು ನಿರ್ಧರಿಸಿದೆ. ಇದು ನೂತನ ಅಧ್ಯಕ್ಷ ಟ್ರಂಪ್‌ರನ್ನು ಅನುಸರಿಸಲು ಮತ್ತು ವ್ಯಾಪಾರ ಸಮರವನ್ನು ತಪ್ಪಿಸಲು ಭಾರತ ಸರಕಾರವು ಸಿದ್ಧವಾಗಿದೆ ಎನ್ನುವುದಕ್ಕೆ ಆರಂಭಿಕ ಸಂಕೇತವಾಗಿದೆ ಎಂದು bloomberg.com ವರದಿ ಮಾಡಿದೆ.
ಅಮೆರಿಕವು ಸ್ವದೇಶಕ್ಕೆ ಮರಳಿ ಕಳುಹಿಸಲು ಸುಮಾರು 18,000 ಅಕ್ರಮ ಭಾರತೀಯ ವಲಸಿಗರನ್ನು ಗುರುತಿಸಿದ್ದು, ಇದಕ್ಕಾಗಿ ಭಾರತವು ಪರಿಶೀಲನೆ ಮತ್ತು ಗಡಿಪಾರು ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಅಮೆರಿಕದಲ್ಲಿ ಎಷ್ಟು ಅಕ್ರಮ ಭಾರತೀಯ ವಲಸಿಗರು ನೆಲೆಸಿದ್ದಾರೆ ಎನ್ನುವುದು ಅಸ್ಪಷ್ಟವಾಗಿರುವುದರಿಂದ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅವು ಹೇಳಿವೆ.
ಅಮೆರಿಕದಲ್ಲಿ ಅಕ್ರಮ ವಲಸಿಗರಲ್ಲಿ ಪಶ್ಚಿಮ ಭಾರತದ,ನಿರ್ದಿಷ್ಟವಾಗಿ ಪಂಜಾಬ್ ಮತ್ತು ಗುಜರಾತ್ ರಾಜ್ಯಗಳ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಇತರ ಹಲವಾರು ದೇಶಗಳಂತೆ ಭಾರತವೂ ಟ್ರಂಪ್ ಆಡಳಿತವನ್ನು ಓಲೈಸಲು ಮತ್ತು ಅದರ ವ್ಯಾಪಾರ ಬೆದರಿಕೆಗಳ ಹೊಡೆತವನ್ನು ತಪ್ಪಿಸಿಕೊಳ್ಳಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ಟ್ರಂಪ್ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಭರವಸೆಯಾಗಿತ್ತು. ಸೋಮವಾರ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜನ್ಮಸಿದ್ಧ ಪೌರತ್ವವನ್ನು ಅಂತ್ಯಗೊಳಿಸುವ ಮತ್ತು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸುವ ಮೂಲಕ ನೂತನ ಅಧ್ಯಕ್ಷರು ತನ್ನ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿರಿಸಿದ್ದಾರೆ.
ಭಾರತವು ತನ್ನ ಸಹಕಾರಕ್ಕೆ ಪ್ರತಿಯಾಗಿ ಟ್ರಂಪ್ ಆಡಳಿತವು ತನ್ನ ಪ್ರಜೆಗಳು ಅಮೆರಿಕವನ್ನು ಪ್ರವೇಶಿಸಲು ಬಳಸುವ ವಿದ್ಯಾರ್ಥಿ ವೀಸಾ ಮತ್ತು ನುರಿತ ಉದ್ಯೋಗಿಗಳಿಗಾಗಿ ಎಚ್-1ಬಿ ಕಾರ್ಯಕ್ರಮದಂತಹ ಕಾನೂನುಬದ್ಧ ವಲಸೆ ಮಾರ್ಗಗಳನ್ನು ರಕ್ಷಿಸುತ್ತದೆ ಎಂದು ಆಶಿಸಿದೆ. 2023ರಲ್ಲಿ ಮಂಜೂರು ಮಾಡಲಾಗಿದ್ದ 3,86,000 ಎಚ್-1ಬಿ ವೀಸಾಗಳಲ್ಲಿ ಸುಮಾರು ಶೇ.75ರಷ್ಟು ಪಾಲು ಭಾರತೀಯರದಾಗಿತ್ತು.
ಅಮೆರಿಕದಲ್ಲಿಯ ಅಕ್ರಮ ವಲಸಿಗರನ್ನು ಹಿಂದಕ್ಕೆ ಕರೆಸಿಕೊಳ್ಳುವಲ್ಲಿ ಯಾವುದೇ ನಿಧಾನಗತಿಯು ಇತರ ದೇಶಗಳೊಂದಿಗಿನ ಭಾರತದ ಕಾರ್ಮಿಕ ಮತ್ತು ಮುಕ್ತ ಚಲನವಲನ ಒಪ್ಪಂದಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಉದ್ಯೋಗಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವು ತೈವಾನ್,ಸೌದಿ ಅರೇಬಿಯ,ಜಪಾನ್ ಮತ್ತು ಇಸ್ರೇಲ್ ಸೇರಿದಂತೆ ಹಲವಾರು ದೇಶಗಳೊಂದಿಗೆ ವಲಸೆ ಒಪ್ಪಂದಗಳಿಗೆ ಸಹಿ ಹಾಕಿದೆ.
ವಲಸ ಮತ್ತು ಮುಕ್ತ ಚಲನವಲನ ಕುರಿತು ಭಾರತ-ಅಮೆರಿಕ ಸಹಕಾರದ ಭಾಗವಾಗಿ ಉಭಯ ದೇಶಗಳು ಅಕ್ರಮ ವಲಸೆಯನ್ನು ತಡೆಯುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. ಭಾರತದಿಂದ ಅಮೆರಿಕ್ಕೆ ಕಾನೂನುಬದ್ಧ ವಲಸೆಗೆ ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದಾರೆ. ಇತ್ತೀಚಿಗೆ ಅಮೆರಿಕದಿಂದ ಚಾರ್ಟರ್ಡ್ ವಿಮಾನದ ಮೂಲಕ ಭಾರತೀಯ ಪ್ರಜೆಗಳ ಗಡಿಪಾರು ಈ ಸಹಕಾರದ ಫಲಶ್ರುತಿಯಾಗಿದೆ ಎಂದು ಅಕ್ಟೋಬರ್‌ನಲ್ಲಿಯ ವಾಪಸಾತಿ ಕ್ರಮವನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
ಯುಎಸ್ ಕಸ್ಟಮ್ಸ್ ಆ್ಯಂಡ್ ಬಾರ್ಡರ್ ಪ್ರೊಟೆಕ್ಷನ್ ಡೇಟಾ ಪ್ರಕಾರ 2024ರ ವಿತ್ತವರ್ಷದಲ್ಲಿ ಅಮೆರಿಕದ ಗಡಿ ಗಸ್ತು ಅಧಿಕಾರಿಗಳು ಪತ್ತೆ ಹಚ್ಚಿರುವ ಎಲ್ಲ ಅಕ್ರಮ ನುಸುಳುವಿಕೆಗಳಲ್ಲಿ ಸುಮಾರು ಶೇ.3ರಷ್ಟು ಪಾಲು ಭಾರತದ ಪ್ರಜೆಗಳದ್ದಾಗಿತ್ತು. ಇವರಲ್ಲಿ ಮೆಕ್ಸಿಕೋ,ವೆನೆಝುವೆಲಾ ಮತ್ತು ಗ್ವಾಟೆಮಾಲಾದಂತಹ ಲ್ಯಾಟಿನ್ ಅಮೆರಿಕನ್ ದೇಶಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ತುಲನಾತ್ಮಕವಾಗಿ ಭಾರತದ ಪಾಲು ಕಡಿಮೆಯಿತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದಿಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಕಡಿಮೆ ಸಂಚಾರವಿರುವ ಅಮೆರಿಕದ ಉತ್ತರದ ಗಡಿಯಲ್ಲಿ ತಡೆಯಲಾಗಿದ್ದ ಅಕ್ರಮ ವಲಸಿಗರಲ್ಲಿ ಶೇ.25ರಷ್ಟು ಭಾರತೀಯರು ಸೇರಿದ್ದರು.
ಅಮೆರಿಕದಲ್ಲಿಯ ಅಕ್ರಮ ಭಾರತೀಯ ವಲಸಿಗರ ಒಟ್ಟು ಸಂಖ್ಯೆಯು ಅನಿರ್ದಿಷ್ಟವಾಗಿದ್ದರೂ, ಕಳೆದ ವರ್ಷ ಆಂತರಿಕ ಭದ್ರತಾ ಇಲಾಖೆಯು ಪ್ರಕಟಿಸಿದ್ದ ವರದಿಯು 2022ಕ್ಕೆ ಇದ್ದಂತೆ ಅಮೆರಿಕದಲ್ಲಿ ಸುಮಾರು 2,20,000 ಅನಧಿಕೃತ ಭಾರತೀಯ ವಲಸಿಗರು ನೆಲೆಸಿದ್ದಾರೆ ಎಂದು ಅಂದಾಜಿಸಿತ್ತು.