EBM News Kannada
Leading News Portal in Kannada

ಛತ್ತೀಸ್ ಗಢದಲ್ಲಿ ಭದ್ರತಾ ಪಡೆಗಳಿಂದ ಜಂಟಿ ಕಾರ್ಯಾಚರಣೆ: 14 ಮಂದಿ ಮಾವೋವಾದಿಗಳ ಹತ್ಯೆ

0


ರಾಯ್ಪುರ : ಒಡಿಶಾದ ಗಡಿಯಲ್ಲಿರುವ ಛತ್ತೀಸ್ ಗಢದ ಗರಿಯಾಬಂದ್ ಜಿಲ್ಲೆಯ ಅರಣ್ಯದಲ್ಲಿ ನಡೆದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಮಾವೋವಾದಿ ಕಮಾಂಡರ್ ಜೈ ರಾಮ್ ಸೇರಿ ಕನಿಷ್ಠ 14 ಮಂದಿ ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ, ಕಾರ್ಯಾಚರಣೆಯ ನಂತರ ವಶಪಡಿಸಿಕೊಂಡ ಮೃತದೇಹಗಳ ಆಧಾರದ ಮೇಲೆ 14 ಮಂದಿ ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹತ್ಯೆಗೀಡಾದವರಲ್ಲಿ ಮಾವೋವಾದಿಗಳ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಕೇಂದ್ರ ಸಮಿತಿಯ ಹಿರಿಯ ಸದಸ್ಯ ಜೈ ರಾಮ್ ಅಲಿಯಾಸ್ ಚಲಪತಿ ಸೇರಿದ್ದಾರೆ ಎಂದು ಗರಿಯಾಬಂದ್ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರಾಖೇಚಾ ತಿಳಿಸಿದ್ದಾರೆ. ಜೈ ರಾಮ್ ತಲೆಗೆ ಈ ಮೊದಲು 1 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಹೇಳಲಾಗಿದೆ.

ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಜಿಲ್ಲಾ ಮೀಸಲು ಪಡೆ(ಡಿಆರ್ ಜಿ), ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್), ಛತ್ತೀಸ್ ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ(ಎಸ್ ಒಜಿ) ಜಂಟಿ ತಂಡವು ಭಾಗಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾದ ನುವಾಪಾ ಜಿಲ್ಲೆಯ ಗಡಿಯಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಛತ್ತೀಸ್ ಗಢದ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ಮಾವೋವಾದಿಗಳಿರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜನವರಿ 19ರ ರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.