EBM News Kannada
Leading News Portal in Kannada

ರಸ್ತೆ ವಿಸ್ತರಣೆಗೆ ತಾಯಿಯ ಸಮಾಧಿ ನೆಲಸಮಕ್ಕೆ ಗುರುತು; ರಕ್ಷಣೆಗೆ ಗುಜರಾತ್ ಹೈಕೋರ್ಟ್ ಮೊರೆ ಹೋದ ಪುತ್ರ

0


ಅಹಮದಾಬಾದ್: ರಸ್ತೆ ವಿಸ್ತರಣೆಗಾಗಿ ಸ್ಥಳೀಯ ಸಂಸ್ಥೆಯಿಂದ ನೆಲಸಮಕ್ಕೆ ಗುರುತಾಗಿರುವ ತನ್ನ ತಾಯಿಯ ಸಮಾಧಿಯನ್ನು ರಕ್ಷಿಸಲು ಗೋಮತಿಪುರ್ ನ ಚಾರ್ತೋಡಾ ಖಬರಸ್ತಾನ್ ನಿವಾಸಿ ಮುಹಮ್ಮದ್ ಇರ್ಶಾದ್ ಅನ್ಸಾರಿ ಎಂಬ ವ್ಯಕ್ತಿ ಗುಜರಾತ್ ಹೈಕೋರ್ಟ್ ನ ಮೆಟ್ಟಿಲೇರಿದ್ದಾರೆ. ಈ ಸಮಾಧಿಯೊಂದಿಗೆ ಹಲವಾರು ಅಂಗಡಿಗಳು ಹಾಗೂ ಮನೆಗಳೂ ರಸ್ತೆ ವಿಸ್ತರಣೆಯ ಭಾಗವಾಗಿ ನೆಲಸಮಗೊಳ್ಳಲು ಗುರುತಾಗಿವೆ.

ಈ ಸಂಬಂಧ ಗುಜರಾತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ 41 ಮಂದಿ ಅರ್ಜಿದಾರರ ಪೈಕಿ ಅನ್ಸಾರಿ ಕೂಡಾ ಸೇರಿದ್ದಾರೆ. ಉಳಿದ ಅರ್ಜಿದಾರರು ಚಾರ್ತೋಡಾ ಖಬರಸ್ತಾನ್ ಗೋಡೆಯಗುಂಟ ಗೋಮತಿ ಪುರ್ ಪ್ರದೇಶದ ಹಾಥಿಕಾಲ್ ಬಳಿಯ ರಸ್ತೆಯನ್ನು ವಿಸ್ತರಣೆಗೊಳಿಸುವ ನಗರ ಯೋಜನೆ ಜಾರಿಯ ಭಾಗವಾಗಿ ತಮ್ಮ ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮಗೊಳಿಸುವ ಅಹಮದಾಬಾದ್ ಮಹಾನಗರ ಪಾಲಿಕೆಯ ಉಪಕ್ರಮವನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ, ನೆಲಸಮಕ್ಕಾಗಿ ಗುರುತು ಮಾಡಿರುವ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುವ ನನ್ನ ತಾಯಿ ಹಬೀಬುನ್ನೀಸಾರ ಸಮಾಧಿಯನ್ನು ನೆಲಸಮಗೊಳಿಸದಂತೆ ಅಹಮದಾಬಾದ್ ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಅನ್ಸಾರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅನ್ಸಾರಿಯ ತಾಯಿ 2020ರ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮೃತಪಟ್ಟಿದ್ದರು.

ನಾನು ನನ್ನ ತಾಯಿಯ ಸಮಾಧಿಯನ್ನು ನೆಲಸಮಗೊಳಿಸಲು ಗುರುತು ಮಾಡಿರುವುದು ನನ್ನ ಭಾವನೆಗಳಿಗೆ ಘಾಸಿಯುಂಟು ಮಾಡಿದೆ ಎಂದು ಅನ್ಸಾರಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.

ಚಾರ್ತೋಡಾ ಖಬರಸ್ತಾನ್ ನಲ್ಲಿ ಎರಡು ಮಸೀದಿಗಳು, ಮನೆಗಳು ಹಾಗೂ ಅಂಗಡಿಗಳು ಸೇರಿದಂತೆ 241 ಕಟ್ಟಡಗಳು ಅಸ್ತಿತ್ವದಲ್ಲಿವೆ. ಈ ಸ್ವತ್ತಿನ ಮಾಲಕತ್ವ ಹಾಗೂ ನಿರ್ವಹಣೆ ಅಹಮದಾಬಾದ್ ನ ಸುನ್ನಿ ಮುಸ್ಲಿಂ ವಕ್ಫ್ ಸಮಿತಿಗೆ ಸೇರಿದೆ.

Leave A Reply

Your email address will not be published.