EBM News Kannada
Leading News Portal in Kannada

“ಝೆಪ್ಟೊ, ಸ್ವಿಗ್ಗಿ, ಝೊಮ್ಯಾಟೊಗೆ ನೋ ಅನ್ನಿ” : 10 ನಿಮಿಷದಲ್ಲಿ ಡೆಲಿವರಿಯಾಗುವ ಆಹಾರದ ಕುರಿತು ಆರೋಗ್ಯ ತಜ್ಞರ ಕಳವಳ

0


ಹೊಸದಿಲ್ಲಿ: ಜೆಪ್ಟೊ ಕೆಫೆ, ಜೊಮಾಟೊದ ಬಿಸ್ಟ್ರೋ ಮತ್ತು ಸ್ವಿಗ್ಗಿ ಬೋಲ್ಟ್ ನಂತಹ ಕಂಪೆನಿಗಳು ಕೇವಲ 10 ನಿಮಿಷಗಳಲ್ಲಿ ಊಟವನ್ನು ತಲುಪಿಸಲು ಸ್ಪರ್ಧಿಸುತ್ತಿರುವುದು, ಜನರ ಆರೋಗ್ಯದ ಬಗ್ಗೆ ಭಾರೀ ಕಳವಳವನ್ನು ಉಂಟು ಹಾಕಿವೆ. ಆರೋಗ್ಯ ತಜ್ಞರು ಈ ಸೇವೆಗಳ ಕುರಿತು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದು, ಈ ತ್ವರಿತಗತಿಯ ಸೇವೆಯು ಅತಿಯಾಗಿ ಸಂಸ್ಕರಿಸಲಾಗಿಸಿರುವ ಆಹಾರವನ್ನು ತಿನ್ನುವಂತೆ ಜನರನ್ನು ಉತ್ತೇಜಿಸುತ್ತವೆ ಎಂದು ಆರೋಪಿಸಿದ್ದಾರೆ.

ಈ ಚರ್ಚೆಗೆ ಧ್ವನಿ ಸೇರಿಸಿರುವ ಮೂಳೆ ಶಸ್ತ್ರಚಿಕಿತ್ಸಕ ಮತ್ತು ನ್ಯೂಟ್ರಿಬೈಟ್ ವೆಲ್ನೆಸ್‌ನ ಸಹ-ಸಂಸ್ಥಾಪಕ ಮನನ್ ವೋರಾ ಅವರು,ʼ10 ನಿಮಿಷಗಳಲ್ಲಿ ಆಹಾರವನ್ನು ತಲುಪಿಸಲು, ಅದನ್ನು 3 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಬೇಯಿಸಬೇಕಾಗುತ್ತದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದುʼ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಲಿಂಕ್ಡ್‌ ಇನ್‌ ನಲ್ಲಿ ದೀರ್ಘ ಪೋಸ್ಟ್‌ ಹಂಚಿಕೊಂಡಿರುವ ಅವರು, ಇಂತಹ ಊಟಗಳು ಅತಿಯಾಗಿ ಸಂಸ್ಕರಿಸಿದವು ಮಾತ್ರವಲ್ಲ, ಪೌಷ್ಟಿಕಾಂಶವನ್ನು ಕೂಡಾ ಹೊಂದಿರುವುದಿಲ್ಲ. ಆಹಾರವನ್ನು ಹತ್ತು ನಿಮಿಷದಲ್ಲಿ ತಲುಪಿಸಬೇಕಾದರೆ ಮೊದಲೇ ಬೇಯಿಸಿ, ಫ್ರೀಝ್‌ ಮಾಡಿಟ್ಟು, ಆರ್ಡರ್‌ ಬಂದಾಗ ಅದನ್ನು ಮೈಕ್ರೋವೇವ್‌ ನಲ್ಲಿ ಮತ್ತೆ ಬೇಯಿಸಿ ವಿತರಿಸಲಾಗುತ್ತದೆ ಎಂಬ ಅಂಶದ ಕಡೆಗೆ ಗಮನ ಸೆಳೆದಿರುವ ಅವರು, ಇಂತಹ ಊಟಗಳನ್ನು ಮಾತ್ರ 10 ನಿಮಿಷದಲ್ಲಿ ತಲುಪಿಸಲು ಸಾಧ್ಯ ಎಂದು ಹೇಳಿದ್ದಾರೆ.

ವೈದ್ಯಕೀಯ ಸಂಶೋಧನೆ ಕೂಡಾ ವೋರಾ ಅವರ ಕಳವಳಗಳನ್ನು ಇನ್ನಷ್ಟು ಹೆಚ್ಚಿಸಿದೆ. ಅವರು ಹೇಳುವಂತೆ, ಅತಿ-ಸಂಸ್ಕರಿಸಿದ ಆಹಾರಗಳು ಶೇ. 12 ರಷ್ಟು ಕ್ಯಾನ್ಸರ್ ಅಪಾಯವನ್ನು ಮತ್ತು ಹೃದಯ ರಕ್ತನಾಳದ ಕಾಯಿಲೆಯನ್ನು ಶೇ. 10 ರಷ್ಟು ಹೆಚ್ಚಿಸುತ್ತದೆ.

ಅಲ್ಲದೆ, ಶೇ. 27.8 ರಷ್ಟು ಭಾರತೀಯ ವಯಸ್ಕರಲ್ಲಿ ಬೊಜ್ಜುತನಕ್ಕೆ ಇದು ಕಾರಣವಾಗುತ್ತದೆ. ಡಯಾಬಿಟೀಸ್, ಬಿಪಿ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಮಟ್ಟದ ಟ್ರಾನ್ಸ್ ಕೊಬ್ಬನ್ನು ಹೊಂದಿರುದರಿಂದ, ಇದು ಹೃದ್ರೋಗಕ್ಕೆ ಕೂಡಾ ಕಾರಣವಾಗುತ್ತದೆ.

ತ್ವರಿತ ಊಟವನ್ನು ಆಯ್ಕೆ ಮಾಡುವ ಮೊದಲು ಜನರು ಎರಡು ಬಾರಿ ಯೋಚಿಸಬೇಕೆಂದು ಆಗ್ರಹಿಸಿದ ಅವರು, “ನಿಮ್ಮ ಮನೆಯಲ್ಲಿ ಬೇಯಿಸಿದ ಆಹಾರವಿಲ್ಲದಿದ್ದರೆ ಹಾಗೂ ಆರ್ಡರ್ ಮಾಡಲೇಬೇಕಾದರೆ, ತಡವಾದರೂ ಪರವಾಗಿಲ್ಲ ಎಂದು ತಾಜಾ ಆಹಾರಕ್ಕಾಗಿ ಸ್ವಲ್ಪ ಹೊತ್ತು ಕಾಯಿರಿ. ನಿಮ್ಮ ಆರೋಗ್ಯದೊಂದಿಗೆ ಯಾವುದೇ ರಾಜಿ ಮಾಡಬೇಡಿ,” ಎಂದಿದ್ದಾರೆ.

ಲಿಂಕ್ಡ್‌ ಇನ್‌ ಪೋಸ್ಟ್‌ ನಲ್ಲಿ ಡೆಲಿವರಿ ಕಂಪೆನಿಗಳಿಗೂ ಚಾಟಿ ಬೀಸಿರುವ ಮನನ್‌ ವೋರಾ “ಪ್ರಿಯ ಜೊಮಾಟೊ, ಸ್ವಿಗ್ಗಿ ಮತ್ತು ಜೆಪ್ಟೊ: ವಿಪರೀತ-ಸಂಸ್ಕರಿಸಿದ ಕಸವನ್ನು 10 ನಿಮಿಷಗಳಲ್ಲಿ ತಲುಪಿಸಲು ನಾವು ಬಯಸುವುದಿಲ್ಲ!” ಎಂದು ಬರೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಬಾಂಬೆ ಶೇವಿಂಗ್ ಕಂಪನಿಯ ಸಿಇಒ ಶಾಂತನು ದೇಶಪಾಂಡೆ ಕೂಡ ಭಾರತದ ಬೆಳೆಯುತ್ತಿರುವ ಫಾಸ್ಟ್-ಫುಡ್ ಸಂಸ್ಕೃತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ‌ಅದರ ಋಣಾತ್ಮಕ ಆರೋಗ್ಯ ಪರಿಣಾಮಗಳಿಂದಾಗಿ ಅವರು ಇದನ್ನು ʼಅತಿದೊಡ್ಡ ಸಾಂಕ್ರಾಮಿಕʼ ಎಂದು ಕರೆದಿದ್ದು, ಸಕ್ಕರೆ ಮತ್ತು ಪಾಮ್ ಎಣ್ಣೆಯಲ್ಲಿ ಹೆಚ್ಚಿನ ಸಂಸ್ಕರಿಸಿದ ಆಹಾರಗಳ ಕುರಿತು ಎಚ್ಚರಿಸಿದರು.

ಅಗ್ಗದ ಅನುಕೂಲಕರ ಊಟಗಳಿಂದ ಉಂಟಾಗುವ ಜಂಕ್ ಫುಡ್ ವ್ಯಸನದ ಸಮಸ್ಯೆಯನ್ನು ಎತ್ತಿ ತೋರಿಸಿದ ಅವರು, ಮನೆಯಲ್ಲಿ ಬೇಯಿಸಿದ ಆಹಾರ‌ ತಿನ್ನುವ ಪದ್ಧತಿಗಳನ್ನು ಒತ್ತಾಯಿಸಿದ್ದರು. ಅತಿ ವೇಗದ ವಿತರಣೆಯಾಗುವ ಆಹಾರದ ಗುಣಮಟ್ಟವನ್ನು ಸುಧಾರಿಸಲು ಜೊಮಾಟೊ ಮತ್ತು ಸ್ವಿಗ್ಗಿಯಂತಹ ಆಹಾರ ವಿತರಣಾ ಕಂಪೆನಿಗಳಿಗೆ ಅವರು ಕರೆ ನೀಡಿದ್ದರು.

Leave A Reply

Your email address will not be published.