ಸಿಯೋಲ್ : ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ 181 ಜನರಿದ್ದ ವಿಮಾನವೊಂದು ಪತನಗೊಂಡಿತ್ತು. ಘಟನೆಗೆ ಮೊದಲೇ ಪತನಗೊಂಡ ವಿಮಾನಕ್ಕೆ ಪಕ್ಷಿಗಳ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂದು ದಕ್ಷಿಣ ಕೊರಿಯಾದ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ.
ಜೆಜು ಏರ್ ಫ್ಲೈಟ್ 2216 ವಿಮಾನವು ಥೈಲ್ಯಾಂಡ್ ನಿಂದ ಹಿಂದಿರುಗುತ್ತಿದ್ದಾಗ, ದಕ್ಷಿಣ ಜಿಯೋಲ್ಲಾ ಪ್ರಾಂತ್ಯದಲ್ಲಿ ಪತನವಾಗಿದೆ. ಘಟನೆಯಲ್ಲಿ ಮೃತರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.
ಸ್ಥಳೀಯ ಮಾಧ್ಯಮಗಳು ಹಂಚಿಕೊಂಡ ವೀಡಿಯೊದಲ್ಲಿ ವಿಮಾನವು ಮುವಾನ್ ವಿಮಾನ ನಿಲ್ದಾಣದಲ್ಲಿ ರನ್ ವೇಯಲ್ಲಿ ಇಳಿಯುವುದನ್ನು ತೋರಿಸಿದೆ. ವಿಮಾನವು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗುವ ಮೊದಲು ಎಂಜಿನ್ ಗಳಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ.
ಪಕ್ಷಿ ಢಿಕ್ಕಿಯಾದ ಬಳಿಕ ವಿಮಾನದ ಲ್ಯಾಂಡಿಂಗ್ ಗೇರ್ ಗೆ ಹಾನಿ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿ ಘಟನೆಗೆ ಕಾರಣ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತದೆ. ಮುವಾನ್ ಅಗ್ನಿಶಾಮಕ ಠಾಣೆಯ ಮುಖ್ಯಸ್ಥ ಲೀ ಜಿಯೋಂಗ್-ಹ್ಯುನ್ ಈ ಕುರಿತು ಪ್ರತಿಕ್ರಿಯಿಸಿದ್ದು, ಪಕ್ಷಿಗಳ ಢಿಕ್ಕಿ ಮತ್ತು ಪ್ರತಿಕೂಲ ಹವಾಮಾನ ಘಟನೆಗೆ ಕಾರಣವೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ನಿಖರವಾದ ತನಿಖೆಯ ಬಳಿಕವೇ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ದಕ್ಷಿಣ ಕೊರಿಯಾದ ಸಾರಿಗೆ ಸಚಿವಾಲಯ ಪ್ರತಿಕ್ರಿಯಿಸಿದ್ದು, ಅವಘಡಕ್ಕೆ ಮೊದಲೇ ವಿಮಾನಕ್ಕೆ ಪಕ್ಷಿಗಳು ಢಿಕ್ಕಿಯಾಗುವ ಬಗ್ಗೆ ಎಚ್ಚರಿಕೆಯನ್ನು ಕಳುಹಿಸಲಾಗಿತ್ತು ಎಂದು ಬಹಿರಂಗಪಡಿಸಿದೆ.
ಲ್ಯಾಂಡಿಂಗ್ ಗೇರ್ ವೈಫಲ್ಯದಿಂದ ವಿಮಾನ ಮೊದಲು ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸಿದೆ. ಎರಡನೇ ಪ್ರಯತ್ನದ ವೇಳೆ ಅವಘಡ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.