EBM News Kannada
Leading News Portal in Kannada

ದಿಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ತಿರುವು; ಪರೀಕ್ಷೆ ಮುಂದೂಡಲು ವಿದ್ಯಾರ್ಥಿಗಳಿಂದಲೇ ಬಾಂಬ್ ಬೆದರಿಕೆ!

0


ಹೊಸದಿಲ್ಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯ ಕೆಲ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿತ್ತು. ಇದೀಗ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದ ಕನಿಷ್ಠ ಮೂರು ಶಾಲೆಗಳಿಗೆ ಪರೀಕ್ಷೆಯನ್ನು ಮುಂದೂಡಲು ಅದೇ ಶಾಲೆಯ ವಿದ್ಯಾರ್ಥಿಗಳು ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾರೆ ಎಂಬುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ನವೆಂಬರ್ 28ರಂದು ರೋಹಿಣಿ ಪ್ರಶಾಂತ್ ವಿಹಾರ್ ಪಿವಿಆರ್ ಮಲ್ಟಿಪ್ಲೆಕ್ಸ್‌ ನಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಇದಾದ ಒಂದು ದಿನದ ನಂತರ ಬಾಂಬ್ ಬೆದರಿಕೆ ಸಂದೇಶ ಸ್ವೀಕರಿಸಿದ ಹಲವಾರು ಶಾಲೆಗಳಲ್ಲಿ ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್ ಕೂಡ ಸೇರಿತ್ತು.

ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್ ಗೆ ಬಂದ ಇಮೇಲ್ ಬೆದರಿಕೆ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಪರೀಕ್ಷೆಗಳನ್ನು ಮುಂದೂಡಬೇಕೆಂದು ಬಯಸಿದ್ದರಿಂದ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಈ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎನ್ನುವುದು ಬಯಲಾಗಿದೆ. ಅಚ್ಚರಿಯೆಂದರೆ ಈ ಇಬ್ಬರು ಆರೋಪಿತ ವಿದ್ಯಾರ್ಥಿಗಳು ಒಡಹುಟ್ಟಿದವರಾಗಿದ್ದಾರೆ.

ಕೌನ್ಸೆಲಿಂಗ್ ಸಮಯದಲ್ಲಿ, ಈ ಮೊದಲು ಬೇರೆ ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ ಸಂದೇಶಗಳಿಂದ ಪ್ರಚೋದಿತವಾಗಿ ಪರೀಕ್ಷೆಯನ್ನು ಮುಂದೂಡುವಂತೆ ಮಾಡಲು ನಮಗೆ ಈ ಕಲ್ಪನೆ ಮೂಡಿದೆ ಎಂದು ವಿದ್ಯಾರ್ಥಿಗಳು ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ಇನ್ನೊಬ್ಬ ಪೊಲೀಸ್ ಅಧಿಕಾರಿಯ ಪ್ರಕಾರ, ರೋಹಿಣಿ ಮತ್ತು ಪಶ್ಚಿಮ ವಿಹಾರ್‌ ನಲ್ಲಿರುವ ಇನ್ನೂ ಎರಡು ಶಾಲೆಗಳಿಗೆ ಅದೇ ಶಾಲೆಯ ವಿದ್ಯಾರ್ಥಿಗಳು ಬೆದರಿಕೆ ಇಮೇಲ್ ಸಂದೇಶಗಳನ್ನು ಕಳುಹಿಸಿದ್ದಾರೆ. ಮೂರು ಬೆದರಿಕೆ ಕರೆಗಳಿಗೂ ಕಾರಣ ಒಂದೇ ಆಗಿದ್ದು, ವಿದ್ಯಾರ್ಥಿಗಳು ಶಾಲೆಗೆ ರಜೆ ಇರಬೇಕೆಂದು ಬಯಸಿದ್ದರು ಎಂದು ಹೇಳಿದ್ದಾರೆ.

Leave A Reply

Your email address will not be published.