ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ತಿಂಗಳ ಬಳಿಕ ಮಹಾಯುತಿ ಮೈತ್ರಿಕೂಟ ಸರ್ಕಾರದ ಸಂಪುಟ ಸದಸ್ಯರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪಟ್ಟುಹಿಡಿದಿದ್ದ ಗೃಹಖಾತೆಯನ್ನು ಫಡ್ನವೀಸ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಅದರೆ ನಗರಾಭಿವೃದ್ಧಿ, ಗೃಹನಿರ್ಮಾಣ ಮತ್ತು ಲೋಕೋಪಯೋಗಿ ಇಲಾಖೆಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಶಿಂಧೆ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಡಿಸಿಎಂ ಅಜಿತ್ ಪವಾರ್ ತಮ್ಮ ಹಣಕಾಸು ಮತ್ತು ಯೋಜನಾ ಖಾತೆಯನ್ನು ಉಳಿಸಿಕೊಂಡಿದ್ದು, ಹೆಚ್ಚುವರಿಯಾಗಿ ಅಬ್ಕಾರಿ ಖಾತೆಯನ್ನು ಪಡೆದಿದ್ದಾರೆ.
ಖಾತೆ ಹಂಚಿಕೆಗೆ ಸಂಬಂಧಿಸಿದ ಶಿಫಾರಸ್ಸನ್ನು ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶನಿವಾರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅನುಮೋದಿಸಿದ್ದಾರೆ. ಸರ್ಕಾರದಲ್ಲಿ ಶಿಂಧೆ ನಂ. 2 ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಅವರಿಗೆ ನೀಡಲಾದ ಖಾತೆಗಳ ಸಂಖ್ಯೆ ದೃಢಪಡಿಸಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಪ್ರಮುಖ ಎಂಎಂಆರ್ಡಿಎ, ಸಿಡ್ಕೊ ಮತ್ತು ಎಂಎಸ್ಆರ್ಡಿಸಿಯಂಥ ಪ್ರಮುಖ ಸಂಸ್ಥೆಗಳ ನಿಯಂತ್ರಣ ಪಡೆದಿದ್ದಾರೆ.
ಇದನ್ನು ಹೊರತುಪಡಿಸಿ ಶಿವಸೇನೆ ಹಿಂದಿನ ಸರ್ಕಾರದಲ್ಲಿದ್ದ ಬಹುತೇಕ ಖಾತೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿಎಂ ಫಡ್ನವೀಸ್ ವಿದ್ಯುತ್, ಕಾನೂನು ಮತ್ತು ನ್ಯಾಯಾಂಗ, ಸಾಮಾನ್ಯ ಆಡಳಿತ ಇಲಾಖೆ, ಮಾಹಿತಿ ಮತ್ತು ಪ್ರಸಾರ ಇಲಾಖೆಗಳನ್ನು ಹೊಂದಿದ್ದಾರೆ.
ಬಿಜೆಪಿಯ ಚಂದ್ರಶೇಖರ ಭಾವಂಕುಲೆ ಕಂದಾಯದ ಜವಾಬ್ದಾರಿ ಪಡೆದಿದ್ದರೆ, ರಾಧಾಕೃಷ್ಣ ವೀಖೆ ಪಾಟೀಲ್ ಜಲಸಂಪನ್ಮೂಲ ಖಾತೆ ಗಿಟ್ಟಿಸಿಕೊಂಡಿದ್ದಾರೆ. ಪ್ರವಾಸೋದ್ಯಮ, ಗಣಿಗಾರಿಕೆ ಮತ್ತು ಮಾಜಿ ಸೈನಿಕರ ಕಲ್ಯಾಣ ಖಾತೆ ಶಿವಸೇನೆಯ ಶಂಭುರಾಜ್ ದೇಸಾಯಿ ಪಾಲಾಗಿದೆ. ಪ್ರತಾಪ್ ಸರನಾಯಕ ಸಾರಿಗೆ ಖಾತೆ ಪಡೆದಿದ್ದು, ಉದಯ ಸಾವಂತ್ ಕೈಗಾರಿಕಾ ಇಲಾಖೆ ಉಳಿಸಿಕೊಂಡಿದ್ದಾರೆ.