EBM News Kannada
Leading News Portal in Kannada

ಅರ್ಜಿದಾರರಿಗೆ ಮತದಾನದ ದಾಖಲೆಗಳನ್ನು ಒದಗಿಸುವಂತೆ ಚುನಾವಣೆ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನದ ಬಳಿಕ ನಿಯಮಗಳನ್ನೇ ಬದಲಿಸಿದ ಕೇಂದ್ರ: ವರದಿ

0


ಹೊಸದಿಲ್ಲಿ: ಕೇಂದ್ರ ಸರಕಾರವು ಚುನಾವಣೆ ಸಂಚಾಲನ ನಿಯಮಗಳನ್ನು ಶುಕ್ರವಾರ ತಿದ್ದುಪಡಿಗೊಳಿಸಿದ್ದು,ಇನ್ನು ಮುಂದೆ ಚುನಾವಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆಯಲು ಸಾರ್ವಜನಿಕರಿಗೆ ಸಾಧ್ಯವಾಗುವುದಿಲ್ಲ.

1961ರ ಚುನಾವಣೆ ಸಂಚಾಲನ ನಿಯಮಾವಳಿಗಳ ಹಿಂದಿನ ನಿಯಮ 93(2)(ಎ),ಚುನಾವಣೆಗೆ ಸಂಬಂಧಿಸಿದ ಎಲ್ಲ ಇತರ ದಾಖಲೆಗಳು ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿರುತ್ತವೆ ಎಂದು ಹೇಳಿತ್ತು.

ಈಗ ತಿದ್ದುಪಡಿಗೊಳಿಸಲಾಗಿರುವ ನಿಯಮವು,ಈ ನಿಯಮಾವಳಿಗಳಲ್ಲಿ ‘ನಿರ್ದಿಷ್ಟ ಪಡಿಸಲಾಗಿರುವ’ ಇತರ ಎಲ್ಲ ದಾಖಲೆಗಳು ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿರುತ್ತವೆ ಎಂದು ಹೇಳುತ್ತದೆ ಎಂದು scroll.in ವರದಿ ಮಾಡಿದೆ.

ಚುನಾವಣಾ ಆಯೋಗದೊಂದಿಗೆ ಸಮಾಲೋಚನೆಯ ಬಳಿಕ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಅಧಿಸೂಚಿಸಿರುವ ಬದಲಾವಣೆಯಿಂದಾಗಿ ಮತದಾನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿರುವುದಿಲ್ಲ. ಚುನಾವಣೆ ಸಂಚಾಲನ ನಿಯಮಾವಳಿಗಳಲ್ಲಿ ನಿರ್ದಿಷ್ಟ ಪಡಿಸಿರುವ ದಾಖಲೆಗಳನ್ನು ಮಾತ್ರ ಸಾರ್ವಜನಿಕರು ಪರಿಶೀಲಿಸಬಹುದು.

ನಿಯಮ ಬದಲಾವಣೆಯಿಂದಾಗಿ ಚುನಾವಣಾ ಸಂಬಂಧಿತ ಎಲ್ಲ ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ನ್ಯಾಯಾಲಯಗಳಿಗೆ ಸಾಧ್ಯವಾಗುವುದಿಲ್ಲ.

ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಡಿ.9ರಂದು ಇತ್ತೀಚಿನ ಹರ್ಯಾಣ ವಿಧಾನಭಾ ಚುನಾವಣೆ ಸಂದರ್ಭದ ವೀಡಿಯೊ ಚಿತ್ರೀಕರಣ, ಭದ್ರತಾ ಕ್ಯಾಮೆರಾಗಳ ದೃಶ್ಯಾವಳಿಗಳು ಮತ್ತು ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ವಕೀಲ ಮೆಹಮೂದ್ ಪ್ರಾಚಾ ಅವರಿಗೆ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

‘ಯಾದ್ರಚ್ಛಿಕ ದಾಖಲೆಗಳು ಮತ್ತು ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನೂ ಕೋರಿ ನಮಗೆ ಎಲ್ಲ ವಿಧಗಳ ಅರ್ಜಿಗಳು ಬರತೊಡಗಿದ್ದವು. ಕೆಲವು ಅರ್ಜಿಗಳನ್ನು ಆರ್‌ಟಿಐ ಮೂಲಕ ಸಲ್ಲಿಸಲಾಗಿತ್ತು. ಕೆಲ ಸಮಯದವರೆಗೆ ಸಾರ್ವಜನಿಕರಿಂದ ಚುನಾವಣೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯನ್ನು ನಿಯಂತ್ರಿಸಲು ನಾವು ಯೋಜಿಸುತ್ತಿದ್ದೆವು. ಈಗ ಉಚ್ಚ ನ್ಯಾಯಾಲಯದ ಈ ಆದೇಶದ ಬಳಿಕ ನಿಯಮಗಳಿಗೆ ತಿದ್ದುಪಡಿಗಳನ್ನು ತರಲಾಗಿದೆ ಮತ್ತು ಅಧಿಸೂಚನೆಯನ್ನು ಹೊರಡಿಸಲಾಗಿದೆ’ ಎಂದು ಚುನಾವಣಾ ಆಯೋಗದ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ನಿಯಮಗಳ ತಿದ್ದುಪಡಿಗೆ ಪ್ರತಿಕ್ರಿಯಿಸಿದ ಪ್ರಾಚಾ,‘ಪ್ರಜಾಪ್ರಭುತ್ವ ಮತ್ತು ಬಾಬಾಸಾಹೇಬರ ಸಂವಿಧಾನವನ್ನು ಉಳಿಸಲು ನಾವು ಪ್ರತಿಕೂಲ ಸ್ಥಿತಿಯಲ್ಲಿ ಹೋರಾಡಬೇಕಿದೆ. ಮನುವಾದಿ ಶಕ್ತಿಗಳು ಇತಿಹಾಸದುದ್ದಕ್ಕೂ ಅಂಬೇಡ್ಕರ್‌ವಾದಿಗಳನ್ನು ಹತ್ತಿಕ್ಕಲು ಅನೈತಿಕ ಮತ್ತು ಅನ್ಯಾಯದ ವಿಧಾನಗಳನ್ನು ಬಳಸುತ್ತಿದ್ದಾರೆ. ಆದರೆ ಈ ಪ್ರಜಾಪ್ರಭುತ್ವ ವಿರೋಧಿ ಮತ್ತು ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ನಾವು ಕಾನೂನು ಮಾರ್ಗಗಳು ಸೇರಿದಂತೆ ನಮ್ಮದೇ ಆದ ವಿಧಾನಗಳನ್ನು ಹೊಂದಿದ್ದೇವೆ’ ಎಂದು ಹೇಳಿದರು.

ಪಂಜಾಬ್ ಮತ್ತು ಹರ್ಯಾಣ ವಿಧಾನಸಭೆಯಲ್ಲಿ ಪ್ರಾಚಾರ ಅರ್ಜಿಯನ್ನು ವಿರೋಧಿಸಿದ್ದ ಚುನಾವಣಾ ಆಯೋಗವು,ಅಕ್ಟೋಬರ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಪ್ರಾಚಾ ಅಭ್ಯರ್ಥಿಯಾಗಿರಲಿಲ್ಲ,ಹೀಗಾಗಿ ಅವರು ಚುನಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಕೋರುವಂತಿಲ್ಲ ಎಂದು ವಾದಿಸಿತ್ತು.

ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗೆ ದಾಖಲೆಗಳನ್ನು ಉಚಿತವಾಗಿ ಒದಗಿಸಬೇಕು ಮತ್ತು ಇತರ ಯಾವುದೇ ವ್ಯಕ್ತಿಗೆ ನಿಗದಿತ ಶುಲ್ಕ ಪಾವತಿಗೆ ಒಳಪಟ್ಟು ದಾಖಲೆಗಳನ್ನು ಒದಗಿಸಬೇಕು ಎನ್ನುವುದು ಅಭ್ಯರ್ಥಿ ಮತ್ತು ಇತರ ಯಾವುದೇ ವ್ಯಕ್ತಿಯ ನಡುವಿನ ಏಕೈಕ ವ್ಯತ್ಯಾಸವಾಗಿದೆ ಎಂಬ ಪ್ರಾಚಾರ ವಾದವನ್ನು ಪುರಸ್ಕರಿಸಿದ್ದ ಉಚ್ಚ ನ್ಯಾಯಾಲಯವು,ಫಾರ್ಮ್ 17ಸಿ ಭಾಗ 1 ಮತ್ತು ಭಾಗ 2 ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಆರು ವಾರಗಳಲ್ಲಿ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

Leave A Reply

Your email address will not be published.