ಹೊಸದಿಲ್ಲಿ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಪಂಜಾಬ್‌ನ ರೈತರು ಸೋಮವಾರ ಶಂಭು ಗಡಿ ಕೇಂದ್ರಕ್ಕೆ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದಾರೆ.
ಹೊಸದಿಲ್ಲಿಯತ್ತ ನಡೆಸಿದ ರ್ಯಾಲಿಯನ್ನು ಹರ್ಯಾಣ ಪೊಲೀಸರು ಮೂರು ಬಾರಿ ವಿಫಲಗೊಳಿಸಿದ ಬಳಿಕ ರೈತರು ಈ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದಾರೆ.
ಬೆಳೆಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ರೈತರು ಪಂಜಾಬ್-ಹರ್ಯಾಣ ಗಡಿಯಲ್ಲಿರುವ ಶಂಭು ಗಡಿ ಕೇಂದ್ರಕ್ಕೆ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾದ ಅಡಿಯಲ್ಲಿ ರೈತರು ಶಂಭು ಗಡಿಯಲ್ಲಿ ಫೆಬ್ರವರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ದಿಲ್ಲಿಗೆ ನಡೆಸಿದ ರ್ಯಾಲಿಯನ್ನು ಹರ್ಯಾಣ ಪೊಲೀಸರು ತಡೆದ ಬಳಿಕ ರೈತರು ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿಂದೆ ನಡೆದ ರ್ಯಾಲಿಯ ಸಂದರ್ಭ ರೈತರ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ರೈತ ನಾಯಕ ಸರವಣ್ ಸಿಂಗ್ ಪಂಧೇರ್ ಅವರು ನೀಡಿದ ಕರೆಯ ಹಿನ್ನೆಲೆಯಲ್ಲಿ ರೈತರು ಈ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದಾರೆ. ಡಿಸಂಬರ್ 14ರಂದು ನಡೆದ ರ್ಯಾಲಿಯ ಸಂದರ್ಭ ಪೊಲೀಸರು ನಡೆಸಿದ ಲಾಠಿ ಪ್ರಹಾರದಿಂದ 15ಕ್ಕೂ ಅಧಿಕ ರೈತರು ಗಾಯಗೊಂಡಿದ್ದಾರೆ ಎಂದು ಪಂಧೇರ್ ಆರೋಪಿಸಿದ್ದಾರೆ.
ಡಿ. 18ರಂದು ನಡೆಯಲಿರುವ ‘ರೈಲ್ ರೋಕೋ’ದಲ್ಲಿ ಜನರು ಪಾಲ್ಗೊಳ್ಳುವಂತೆ ಪಂಧೇರ್ ಆಗ್ರಹಿಸಿದ್ದಾರೆ. ರೈಲ್ವೆ ಹಳಿಗಳ ಸಮೀಪ ವಾಸಿಸುತ್ತಿರುವವರು ತಮ್ಮ ಸಮೀಪದ ರೈಲ್ವೆ ಕ್ರಾಸಿಂಗ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಧ್ಯಾಹ್ನ 12ರಿಂದ 3 ಗಂಟೆ ವರೆಗೆ ಧರಣಿ ನಡೆಸುವಂತೆ ಪಂಜಾಬ್‌ನ ಎಲ್ಲಾ 13 ಸಾವಿರ ಗ್ರಾಮಗಳ ಜನರಲ್ಲಿ ನಾವು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.