ಹೊಸದಿಲ್ಲಿ: ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಗೆ ಇಂದು ಆಮ್ ಆದ್ಮಿ ಪಕ್ಷ ತನ್ನ ನಾಲ್ಕನೆ ಪಟ್ಟಿ ಪ್ರಕಟಿಸಿದ್ದು, ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೆ ಸ್ಪರ್ಧಾ ಕಣಕ್ಕಿಳಿಯುವುದು ಖಚಿತವಾಗಿದೆ. ಅರವಿಂದ್ ಕೇಜ್ರಿವಾಲ್‌ರೊಂದಿಗೆ ಮುಖ್ಯಮಂತ್ರಿ ಅತಿಶಿ ಹೆಸರೂ ನಾಲ್ಕನೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ದಿಲ್ಲಿ ಮುಖ್ಯಮಂತ್ರಿ ಅತಿಶಿ ಹಾಗೂ ಸಚಿವರಾದ ಸೌರಭ್ ಭಾರದ್ವಾಜ್ ಮತ್ತು ಗೋಪಾಲ್ ರಾಯ್ ಕ್ರಮವಾಗಿ ತಮ್ಮ ಹಾಲಿ ವಿಧಾನಸಭಾ ಕ್ಷೇತ್ರಗಳಾದ ಕಲ್ಕಜಿ, ಗ್ರೇಟರ್ ಕೈಲಾಶ್ ಹಾಗೂ ಬಾಬರ್‌ಪುರ್‌ನಿಂದ ಕಣಕ್ಕಿಳಿಯಲಿದ್ದಾರೆ.
ಈ ಪಟ್ಟಯೊಂದಿಗೆ ದಿಲ್ಲಿ ವಿಧಾನಸಭೆಯ ಎಲ್ಲ 70 ವಿಧಾನಸಭಾ ಕ್ಷೇತ್ರಗಳಿಗೆ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ. ಆಮ್ ಆದ್ಮಿ ಪಕ್ಷ ತನ್ನ ನಾಲ್ಕನೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬೆನ್ನಿಗೇ, “ಆಮ್ ಆದ್ಮಿ ಪಕ್ಷವು ಈ ಚುನಾವಣೆಯನ್ನು ಸಂಪೂರ್ಣ ವಿಶ್ವಾಸ ಹಾಗೂ ಸಿದ್ಧತೆಯೊಂದಿಗೆ ಎದುರಿಸಲಿದೆ” ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರೂ ಆದ ಅರವಿಂದ್ ಕೇಜ್ರಿವಾಲ್ ಹೇಳಿದರು.