EBM News Kannada
Leading News Portal in Kannada

2000 ರೂ. ಸಾಲ ಮರುಪಾವತಿಗೆ ವಿಫಲವಾಗಿದ್ದಕ್ಕೆ ಪತ್ನಿಯ ತಿರುಚಿದ ಚಿತ್ರ ವೈರಲ್ ; ಮನನೊಂದ ಪತಿ ಆತ್ಮಹತ್ಯೆ

0


ಅಮರಾವತಿ : ಸಾಲ ತಂತ್ರಾಂಶದ ಏಜೆಂಟ್ ಗಳು ಸಾಲ ವಸೂಲಾತಿಗಾಗಿ ತನ್ನ ಪತ್ನಿಯ ತಿರುಚಿದ ಭಾವಚಿತ್ರಗಳನ್ನು ತನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ರವಾನಿಸಿದ್ದರಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಇದರ ಬೆನ್ನಿಗೇ, ಇಂತಹ ಲೇವಾದೇವಿ ಸಂಸ್ಥೆಗಳು ಸಾಲ ವಸೂಲಾತಿಗಾಗಿ ಅನುಸರಿಸುವ ಅಮಾನವೀಯ ಹಾಗೂ ಕ್ರಿಮಿನಲ್ ಕ್ರಮಗಳ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ವ್ಯಾಪಕ ಕಳವಳ ವ್ಯಕ್ತವಾಗಿದೆ.

25 ವರ್ಷದ ನರೇಂದ್ರ ಎಂಬಾತ ಅಖಿಲಾ ಎಂಬ ಯುವತಿಯನ್ನು ಅಕ್ಟೋಬರ್ 28ರಂದು ಅಂತರ್ಜಾತಿ ವಿವಾಹವಾಗಿದ್ದರು. ಮೀನುಗಾರನಾಗಿದ್ದ ಯುವಕನ ತವರಾದ ವಿಶಾಖಪಟ್ಟಣಂನಲ್ಲಿ ದಂಪತಿಗಳು ವಾಸಿಸುತ್ತಿದ್ದರು. ಆದರೆ, ಪ್ರತಿಕೂಲ ಹವಾಮಾನದಿಂದ ಯುವಕನು ಕೆಲ ದಿನಗಳ ಕಾಲ ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆತ ಹಣಕಾಸು ಬಿಕ್ಕಟ್ಟಿಗೆ ಒಳಗಾಗಿದ್ದ ಎನ್ನಲಾಗಿದೆ.

ಆಗ ತನ್ನ ವೆಚ್ಚಗಳಿಗಾಗಿ ಸಾಲ ತಂತ್ರಾಂಶವೊಂದರಿಂದ ನರೇಂದ್ರ 2000 ರೂ. ಸಾಲ ಪಡೆದಿದ್ದಾನೆ. ಆದರೆ, ಕೆಲವೇ ದಿನಗಳಲ್ಲಿ ಸಾಲವನ್ನು ಮರುಪಾವತಿಸುವಂತೆ ಸಾಲ ತಂತ್ರಾಂಶದ ಏಜೆಂಟ್ ಗಳು ನಿಂದನಾತ್ಮಕ ಸಂದೇಶಗಳನ್ನು ರವಾನಿಸಿ, ಆತನನ್ನು ಪೀಡಿಸಲು ಪ್ರಾರಂಭಿಸಿದ್ದಾರೆ.

ಇದಲ್ಲದೆ ನರೇಂದ್ರನ ಸಂಪರ್ಕ ಪಟ್ಟಿಯಲ್ಲಿದ್ದ ಆತನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಬೆಲೆಯ ನಮೂದಿನೊಂದಿಗೆ ಆತನ ಪತ್ನಿಯ ತಿರುಚಿದ ಭಾವಚಿತ್ರವನ್ನೂ ರವಾನಿಸಿದ್ದಾರೆ. ಆ ಭಾವಚಿತ್ರ ಅಖಿಲಾ ಮೊಬೈಲ್ ನಲ್ಲಿ ಕಾಣಿಸಿಕೊಂಡಾಗ, ಆ ವಿಚಾರವನ್ನು ಆಕೆ ತನ್ನ ಪತಿಯ ಗಮನಕ್ಕೆ ತಂದಿದ್ದಾಳೆ. ಆಗ ತಾನು ಸಾಲ ಪಡೆದಿರುವ ಸಂಗತಿಯನ್ನು ನರೇಂದ್ರ ಆಕೆಗೆ ತಿಳಿಸಿದ್ದಾನೆ.

ನಂತರ, ಆ ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿಸಲು ಆ ದಂಪತಿಗಳು ನಿರ್ಧರಿಸಿದ್ದಾರಾದರೂ, ಅವರಿಗೆ ಅದು ಸಾಧ್ಯವಾಗಿಲ್ಲ. ಹೀಗಾಗಿ, ಸಾಲದ ಏಜೆಂಟ್ ಗಳ ಕಿರುಕುಳ ಮುಂದುವರಿದಿದೆ.

ಆದರೆ, ಕೆಲವೇ ದಿನಗಳಲ್ಲಿ ನರೇಂದ್ರನ ಪರಿಚಿತರು ಆತ ಪತ್ನಿಯ ಭಾವಚಿತ್ರದ ಕುರಿತು ಕರೆ ಮಾಡಿ ವಿಚಾರಿಸಲು ಪ್ರಾರಂಭಿಸಿದ್ದರಿಂದ, ನರೇಂದ್ರ ಕುಗ್ಗಿ ಹೋಗಿದ್ದಾನೆ. ಇದರಿಂದ ಆಘಾತಕ್ಕೊಳಗಾಗಿ, ಅಪಮಾನಿತನಾಗಿರುವ ನರೇಂದ್ರ, ವಿವಾಹವಾದ ಕೇವಲ ಆರು ವಾರಗಳಲ್ಲೇ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಂಧ್ರಪ್ರದೇಶದಿಂದ ಈ ವಾರ ವರದಿಯಾಗಿರುವ ಇಂತಹ ಮೂರನೆ ಘಟನೆ ಇದಾಗಿದೆ. ಸಾಲದ ಏಜೆಂಟ್ ಗಳಿಂದ ಮನನೊಂದ ನಂದ್ಯಾಲ ಜಿಲ್ಲೆಯ ಯುವತಿಯೊಬ್ಬಳು ಬುಧವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳಾದರೂ, ಪೊಲೀಸರು ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಸಾಲ ತಂತ್ರಾಂಶಗಳ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದ ಆಂಧ್ರಪ್ರದೇಶ ಗೃಹ ಸಚಿವೆ ಅನಿತಾ, ಅಂತಹ ವ್ಯಕ್ತಿಗಳ ವಿರುದ್ಧ ಸರಕಾರ ದಾಳಿ ಮಾಡಲು ಪ್ರಾರಂಭಿಸಲಿದೆ ಎಂದು ಎಚ್ಚರಿಸಿದ್ದರು.

ಸೌಜನ್ಯ : NDTV

Leave A Reply

Your email address will not be published.