ಹೊಸದಿಲ್ಲಿ: ಉತ್ತರ ಪ್ರದೇಶದ ರಾಜ್ಯ, ಜಿಲ್ಲೆ, ನಗರ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ವಿಸರ್ಜಿಸಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದಿದ್ದ ವಿಧಾನಸಭಾ ಉಪ ಚುನಾವಣೆಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಈ ಉಪ ಚುನಾವಣೆಯಲ್ಲಿ ತನ್ನ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದ ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾದ ಸಮಾಜವಾದಿ ಪಕ್ಷಕ್ಕೆ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಬಲ ಘೋಷಿಸಿತ್ತು.
ರಾಜ್ಯ ಕಾಂಗ್ರೆಸ್ ಘಟಕವನ್ನು ಮರು ಸಂಘಟಿಸಿ, ಪಕ್ಷವನ್ನು ಬೇರು ಮಟ್ಟದಿಂದ ಬಲಿಷ್ಠಗೊಳಿಸುವ ಗುರಿಯನ್ನು ಈ ಕ್ರಮ ಒಳಗೊಂಡಿದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದ ರಾಜ್ಯ, ಜಿಲ್ಲೆ, ನಗರ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸುವ ಪ್ರಸ್ತಾವಕ್ಕೆ ಖರ್ಗೆ ಅನುಮೋದನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ನೇತೃತ್ವವನ್ನು ಅಜಯ್ ರಾಯ್ ವಹಿಸಿದ್ದರು.