ಚಂಡೀಗಢ : ಅಮೃತಸರದ ಸ್ವರ್ಣ ಮಂದಿರದ ಹೊರಗೆ ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಇಂದು ಬೆಳಗ್ಗೆ ಹತ್ಯಾಪ್ರಯತ್ನ ನಡೆದಿದ್ದು, ಓರ್ವ ಸಹಾಯಕ ಸಬ್ ಇನ್ಸ್ ಪೆಕ್ಟರ್ ತೋರಿದ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.
ತಮಗೆ ವಿಧಿಸಲಾಗಿರುವ ಧಾರ್ಮಿಕ ಶಿಕ್ಷೆಯ ಭಾಗವಾಗಿ ಕಾಲಿನ ಮೂಳೆಮುರಿತಕ್ಕೆ ಒಳಗಾಗಿರುವ ಸುಖ್ಬೀರ್ ಸಿಂಗ್ ಬಾದಲ್ ಸ್ವರ್ಣ ಮಂದಿರದ ಪ್ರವೇಶ ದ್ವಾರದ ಬಳಿ ಗಾಲಿ ಕುರ್ಚಿಯಲ್ಲಿ ಕುಳಿತಿದ್ದರು. ಅವರ ಬಳಿಯೇ ಸಹಾಯಕ ಸಬ್ ಇನ್ಸ್ ಪೆಕ್ಟರ್ ಜಸ್ಬೀರ್ ಸಿಂಗ್ ನಿಂತಿದ್ದರು. ಆದರೆ, ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕನಿಗೆ ಜೀವಾಪಾಯವಾಗುವ ಸಾಧ್ಯತೆಯನ್ನು ಗ್ರಹಿಸಿದ ಅವರು, ಕ್ಷಣಾರ್ಧದಲ್ಲಿ ಕಾರ್ಯೋನ್ಮುಖರಾಗಿ ಅವರ ಹತ್ಯಾಪ್ರಯತ್ನವನ್ನು ವಿಫಲಗೊಳಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ, ಸ್ವರ್ಣ ಮಂದಿರದ ಪ್ರವೇಶ ದ್ವಾರದ ಬಳಿ ಗಾಲಿ ಕುರ್ಚಿಯ ಮೇಲೆ ಕುಳಿತಿದ್ದ ಸುಖ್ಬೀರ್ ಸಿಂಗ್ ಬಾದಲ್ ರನ್ನು ನಿಧಾನವಾಗಿ ಸಮೀಪಿಸಿರುವ ಮಾಜಿ ಭಯೋತ್ಪಾದಕ ನಾರಾಯಣ್ ಸಿಂಗ್ ಚೌರ, ದಿಢೀರನೆ ತನ್ನ ಜೇಬಿನಿಂದ ಪಿಸ್ತೂಲ್ ಹೊರ ತೆಗೆದು ಅವರತ್ತ ಗುಂಡು ಹಾರಿಸಲು ಮುಂದಾಗಿರುವುದು ಸೆರೆಯಾಗಿದೆ.
ಚೌರ ಇನ್ನೇನು ಪಿಸ್ತೂಲಿನ ಟ್ರಿಗರ್ ಒತ್ತಬೇಕು ಎನ್ನುವಾಗಲೇ ಸಮಯ ಪ್ರಜ್ಞೆ ಮೆರೆದಿರುವ ಜಸ್ಬೀರ್ ಸಿಂಗ್, ಆತನ ಮೇಲೆರಗಿದ್ದಾರೆ. ಆತನ ಕೈಯನ್ನು ಬಲವಾಗಿ ಹಿಡಿದುಕೊಂಡಿರುವ ಜಸ್ಬೀರ್ ಸಿಂಗ್, ಅದನ್ನು ಮೇಲ್ಮುಖಕ್ಕೆ ತಿರುಗಿಸಿ, ಆತನನ್ನು ಹಿಂದಕ್ಕೆ ದೂಡಿದ್ದಾರೆ. ಈ ಘರ್ಷಣೆಯಲ್ಲಿ ಪಿಸ್ತೂಲಿನಿಂದ ಗುಂಡು ಹಾರಿತಾದರೂ, ಅದೃಷ್ಟವಶಾತ್, ಸುಖ್ಬೀರ್ ಸಿಂಗ್ ಬಾದಲ್ ಹಿಂಬದಿಯಲ್ಲಿದ್ದ ಸ್ವರ್ಣ ಮಂದಿರದ ಪ್ರವೇಶದ ದ್ವಾರದ ಗೋಡೆಗೆ ತಾಕಿದೆ. ಹೀಗಾಗಿ ಸುಖ್ಬೀರ್ ಸಿಂಗ್ ಬಾದಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ವೇಳೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಕಾರ್ಯಪಡೆಯೊಂದಿಗೆ ಸ್ಥಳದಲ್ಲಿ ಉಪಸ್ಥಿತರಿದ್ದ ಇನ್ನಿತರ ಭದ್ರತಾ ಸಿಬ್ಬಂದಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಚೌರಾನಿಂದ ಪಿಸ್ತೂಲ್ ಅನ್ನು ಕಸಿದುಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಜಸ್ಬೀರ್ ಸಿಂಗ್, ನಾನು ನನ್ನ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದೇನೆ ಎಂದು ಹೇಳಿದರು.
“ಚೌರ ಬಂದಾಗ ನಾನು ಜಾಗೃತವಾಗಿದ್ದೆ. ಆತ ತನ್ನ ಪಿಸ್ತೂಲ್ ಅನ್ನು ಹೊರತೆಗೆದಾಗ, ನಾವು ಅವನನ್ನು ತಡೆದು, ಆತನಿಂದ ಪಿಸ್ತೂಲ್ ಕಸಿದುಕೊಂಡೆವು” ಎಂದು ಅವರು ತಿಳಿಸಿದರು.
2007ರಿಂದ 2017ರ ನಡುವೆ ಶಿರೋಮಣಿ ಅಕಾಲಿ ದಳ ಸರಕಾರ ಮಾಡಿದ ತಪ್ಪುಗಳಿಗಾಗಿ ಧಾರ್ಮಿಕ ಶಿಕ್ಷೆಗೆ ಗುರಿಯಾಗಿರುವ ಸುಖ್ಬೀರ್ ಸಿಂಗ್ ಬಾದಲ್, ಸ್ವರ್ಣ ಮಂದಿರದಲ್ಲಿ ಪೂರೈಸುತ್ತಿರುವ ಧಾರ್ಮಿಕ ಧಾರ್ಮಿಕ ಶಿಕ್ಷೆಯ ಎರಡನೆ ದಿನವನ್ನು ಸೆರೆ ಹಿಡಿಯಲು ಸ್ವರ್ಣ ಮಂದಿರದ ಹೊರಗೆ ಮಾಧ್ಯಮಗಳು ಠಿಕಾಣಿ ಹೂಡಿರುವಾಗಲೇ ಈ ನಿರ್ಭೀತ ದಾಳಿ ಪ್ರಯತ್ನ ನಡೆದಿದೆ.
ಈ ನಡುವೆ, ಸುಖ್ಬೀರ್ ಸಿಂಗ್ ಬಾದಲ್ ಮೇಲೆ ನಡೆದ ಹತ್ಯಾಪ್ರಯತ್ನವನ್ನು ವಿಫಲಗೊಳಿಸಿದ ಪೊಲೀಸ್ ಅಧಿಕಾರಿಯನ್ನು ಅಮೃತಸರ ಪೊಲೀಸ್ ಆಯುಕ್ತ ಗುರ್ಪ್ರೀತ್ ಸಿಂಗ್ ಭುಲ್ಲರ್ ಪ್ರಶಂಸಿಸಿದ್ದಾರೆ.
ದಾಳಿಕೋರನನ್ನು ಸೆರೆ ಹಿಡಿಯುವಲ್ಲಿ ಪೊಲೀಸ್ ಅಧಿಕಾರಿ ತೋರಿದ ಚುರುಕುತನವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡಾ ಶ್ಲಾ ಘಿಸಿದ್ದಾರೆ.
ಸ್ವರ್ಣ ಮಂದಿರದಲ್ಲಿ ಓರ್ವ ಸಹಾಯಕ ಪೊಲೀಸ್ ಮಹಾ ನಿರೀಕ್ಷಕ, ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳು, ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ 175 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು ಎಂದು ವಿಶೇಷ ಪೊಲೀಸ್ ಮಹಾ ನಿರ್ದೇಶಕ ಅರ್ಪಿತ್ ಶುಕ್ಲಾ ತಿಳಿಸಿದ್ದಾರೆ.