EBM News Kannada
Leading News Portal in Kannada

ನನ್ನ ಧರ್ಮ, ನನ್ನ ಹೆಸರಿನ ಕಾರಣಕ್ಕೆ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಯಿತು: 107 ದಿನ ಜೈಲಿನಲ್ಲಿ ಕಳೆದಿದ್ದ ಬಳೆ ವ್ಯಾಪಾರಿಯ ಖುಲಾಸೆ

0


ಹೊಸದಿಲ್ಲಿ: 2021ರ ಆ. 22ರಂದು ಮಧ್ಯಪ್ರದೇಶದ ಇಂದೋರಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ಗುಂಪಿನಿಂದ ಹಲ್ಲೆಗೊಳಗಾದ ಬಳಿಕ ಬಂಧಿಸಲ್ಪಟ್ಟು 107 ದಿನಗಳ ಕಾಲ ಜೈಲಿನಲ್ಲಿ ಕೊಳೆತಿದ್ದ ಬಳೆ ವ್ಯಾಪಾರಿ, ಉತ್ತರ ಪ್ರದೇಶದ ನಿವಾಸಿ ತಸ್ಲೀಮ್ ಅಲಿಯನ್ನು ಜಿಲ್ಲಾ ನ್ಯಾಯಾಲಯವು ಸೋಮವಾರ ಬಿಡುಗಡೆಗೊಳಿಸಿದೆ ಎಂದು indianexpress.com ವರದಿ ಮಾಡಿದೆ.

ಘಟನೆಯ ಬಳಿಕ ವೈರಲ್ ಆಗಿದ್ದ ವೀಡಿಯೊಗಳಲ್ಲಿ ರಾಖಿ ಸಂದರ್ಭದಲ್ಲಿ ಬಳೆಗಳನ್ನು ಮಾರಾಟ ಮಾಡುವ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಗುಂಪೊಂದು ಅಲಿಯನ್ನು ಥಳಿಸುತ್ತಿದ್ದ ಮತ್ತು ನಿಂದಿಸುತ್ತಿದ್ದ ದೃಶ್ಯಗಳನ್ನು ತೋರಿಸಿದ್ದವು. ಹಿಂದೂಗಳ ಪ್ರದೇಶದಲ್ಲಿ ಮತ್ತೆ ಕಾಲಿರಿಸದಂತೆ ಗುಂಪು ಅಲಿಗೆ ಎಚ್ಚರಿಕೆಯನ್ನೂ ನೀಡಿತ್ತು.

ತನ್ನ ಮೇಲೆ ಹಲ್ಲೆ ನಡೆಸಿದ್ದವರ ವಿರುದ್ಧ ಅಲಿ ಬನಗಂಗಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಐದಾರು ಜನರ ಗುಂಪೊಂದು ತನ್ನ ಹೆಸರನ್ನು ಕೇಳಿ ತನ್ನನ್ನು ಥಳಿಸಿದೆ,ಕೋಮು ನಿಂದನೆಗಳನ್ನು ಮಾಡಿದೆ ಮತ್ತು ತನ್ನ ಬಳಿಯಿದ್ದ 10,000 ರೂ.,ಮೊಬೈಲ್ ಫೋನ್ ಮತ್ತು ಆಧಾರ ಕಾರ್ಡ್ ಸೇರಿದಂತೆ ದಾಖಲೆಗಳನ್ನು ಕಿತ್ತುಕೊಂಡಿದೆ ಎಂದು ಅಲಿ ದೂರಿನಲ್ಲಿ ಆರೋಪಿಸಿದ್ದರು. ದೂರಿನ ಆಧಾರದಲ್ಲಿ ಪೋಲಿಸರು ನಾಲ್ವರನ್ನು ಬಂಧಿಸಿದ್ದರು. ಆದರೆ ಇದರ ಬೆನ್ನಲ್ಲೇ 13 ಹರೆಯದ ಬಾಲಕಿಯೋರ್ವಳ ದೂರಿನ ಆಧಾರದಲ್ಲಿ ಪೋಲಿಸರು ಅಲಿ ವಿರುದ್ಧವೇ ಪೊಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಜೈಲಿಗೆ ತಳ್ಳಿದ್ದರು.

ಖುಲಾಸೆಗೊಂಡ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಲಿ, ’ನನಗೆ ಸಂತೋಷ ಮತ್ತು ದುಃಖ ಎರಡೂ ಆಗಿವೆ. ನನ್ನ ಪರವಾಗಿ ನಿಂತವರಿಗೆ,ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದವರಿಗೆ ಮತ್ತು ನನ್ನನ್ನು ಥಳಿಸಿದ್ದವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನ ಧರ್ಮ ಮತ್ತು ನನ್ನ ಹೆಸರಿನ ಕಾರಣದಿಂದಾಗಿ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು’ ಎಂದು ಹೇಳಿದರು.

‘ನಾನು ಶಾಂತಿಯನ್ನು ಬಯಸಿದ್ದೇನೆ, ನಡೆದು ಹೋದ ಘಟನೆಯನ್ನು ಮರೆಯಲು ಬಯಸುತ್ತೇನೆ. ಇಂದೋರ್ ನಗರದ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಅಲ್ಲಿಯ ಎಲ್ಲ ನಿವಾಸಿಗಳು ನನ್ನ ಸೋದರರು ಮತ್ತು ಸೋದರಿಯರು’ ಎಂದು ಹೇಳಿದ ಅಲಿ,‌ ‘ಜೈಲಿನಲ್ಲಿ ಜೇಲರ್‌ಗಳಾಗಲಿ ಪೋಲಿಸರಾಗಲಿ ನನಗೆ ಕಿರುಕುಳ ನೀಡಿರಲಿಲ್ಲ. ನಾನು ಸಂವಿಧಾನ ಮತ್ತು ನ್ಯಾಯಾಂಗದಲ್ಲಿ ವಿಶ್ವಾಸವನ್ನು ಹೊಂದಿದ್ದೆ’ ಎಂದರು.

ಡಿಸೆಂಬರ್ 2021ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಅಲಿ ಮತ್ತೆ ಇಂದೋರಿನ ಬೀದಿಗಳಿಗೆ ಮರಳಿ ಬಳೆಗಳ ವ್ಯಾಪಾರವನ್ನು ಮುಂದುವರಿಸಿದ್ದಾರೆ.

ಅಪ್ರಾಪ್ತ ವಯಸ್ಕ ಬಾಲಕಿ ಸೇರಿದಂತೆ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರಿಂದ ನ್ಯಾಯಾಲಯವು ಅಲಿಯನ್ನು ಖುಲಾಸೆಗೊಳಿಸಿದೆ ಎಂದು ವಕೀಲರು ತಿಳಿಸಿದರು.

Leave A Reply

Your email address will not be published.