ಅಗರ್ತಲಾ : ಮಹತ್ವದ ಬೆಳವಣಿಗೆಯೊಂದರಲ್ಲಿ ತ್ರಿಪುರಾದ ಅಗರ್ತಲಾದಲ್ಲಿರುವ ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ವೀಸಾ ಸೇರಿದಂತೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಹೈ ಕಮಿಷನ್ ನ ರಾಜತಾಂತ್ರಿಕ ಅಧಿಕಾರಿ ಎಂಡಿ ಅಲ್-ಅಮೀನ್ ಅವರು ಪ್ರಸ್ತುತ ಭದ್ರತಾ ಹಿತದೃಷ್ಟಿಯಿಂದ ಸೇವೆಗಳನ್ನು ಅಮಾನತುಗೊಳಿಸಿರುವುದನ್ನು ದೃಢಪಡಿಸಿದ್ದಾರೆ. ಮುಂದಿನ ಸೂಚನೆ ಬರುವವರೆಗೆ ಎಲ್ಲಾ ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂ ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಬಂಧನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪು ಅಗರ್ತಲಾದ ಅಸಿಸ್ಟೆಂಟ್ ಹೈ ಕಮಿಷನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಈ ನಿರ್ಧಾರವನ್ನು ಘೋಷಿಸಿದೆ.
ಅಗರ್ತಲಾದಲ್ಲಿನ ಹೈಕಮಿಷನ್ ಮೇಲಿನ ದಾಳಿಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು, ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದಾಳಿಗೆ ಸಂಬಂಧಿಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚುವರಿಯಾಗಿ ಮೂವರು ಸಬ್ ಇನ್ಸ್ಪೆಕ್ಟರ್ ಗಳನ್ನು ಕೂಡ ಅಮಾನತು ಮಾಡಲಾಗಿದೆ. ಇದಲ್ಲದೆ ಬಾಂಗ್ಲಾದೇಶದ ಗಡಿಯಲ್ಲಿರುವ ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿನ ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ ಆವರಣದಲ್ಲಿನ ದಾಳಿಗೆ ಭಾರತವು ತೀವ್ರ ವಿಷಾದವನ್ನು ವ್ಯಕ್ತಪಡಿಸಿದೆ.