ಕೊಲ್ಕತ್ತಾ: ಬಾಂಗ್ಲಾದೇಶದಲ್ಲಿ ಹಿಂದೂ ಧರ್ಮಗುರು ಚಿನ್ಮಯ ಕೃಷ್ಣ ಪ್ರಭುದಾಸ್ ಅವರ ಪರ ಕಾನೂನು ಪ್ರಕರಣವೊಂದರಲ್ಲಿ ವಾದ ಮಂಡಿಸಿದ್ದಕ್ಕಾಗಿ ವಕೀಲ ರಮೇನ್ ರಾಯ್ ವಿರುದ್ಧ ದಾಳಿ ನಡೆದಿದ್ದು, ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ. ರಮೇನ್ ದಾಸ್ ಅವರು ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಕೊಲ್ಕತ್ತಾ ಇಸ್ಕಾನ್ ವಕ್ತಾರ ರಾಧಾ ರಮಣ ದಾಸ್ ತಿಳಿಸಿದ್ದಾರೆ.
ರಮೇನ್ ರಾಯ್ ಮಾಡಿದ ಏಕೈಕ ತಪ್ಪು ಎಂದರೆ ಚಿನ್ಮಯ್ ದಾಸ್ ಪರ ಕೋರ್ಟ್ ನಲ್ಲಿ ವಾದ ಮಂಡಿಸಿದ್ದು. ಅವರ ಮೇಲೆ ಅಮಾನುಷ ದಾಳಿ ನಡೆದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
“ದಯವಿಟ್ಟು ವಕೀಲ ರಮೇನ್ ರಾಯ್ ಅವರಿಗಾಗಿ ಪ್ರಾರ್ಥಿಸಿ. ಅವರು ಮಾಡಿದ ತಪ್ಪೆಂದರೆ, ಚಿನ್ಮಯ್ ಕೃಷ್ಣ ಪ್ರಭು ಅವರನ್ನು ಕೋರ್ಟ್ ನಲ್ಲಿ ಸಮರ್ಥಿಸಿಕೊಂಡದ್ದು. ಪ್ರತಿಭಟನಾಕಾರರು ಅವರ ಮನೆಯನ್ನು ಧ್ವಂಸಗೊಳಿಸಿದ್ದಲ್ಲದೇ, ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅವರು ಐಸಿಯುನಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಬಾಂಗ್ಲಾದೇಶಿ ಹಿಂದೂಗಳನ್ನು ರಕ್ಷಿಸಿ ಮತ್ತು ಚಿನ್ಮಯ ಕೃಷ್ಣಪ್ರಭು ಅವರನ್ನು ಬಿಡುಗಡೆ ಮಾಡಿ” ಎಂದು ಎಕ್ಸ್ ಪೋಸ್ಟ್ ನಲ್ಲಿ ಇಸ್ಕಾನ್ ವಕ್ತಾರರು ಆಗ್ರಹಿಸಿದ್ದಾರೆ. ರಾಯ್ ಐಸಿಯುನಲ್ಲಿರುವ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.