ಹೊಸದಿಲ್ಲಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲು ‘‘ದಿಲ್ಲಿ ಚಲೋ’’ ರ‍್ಯಾಲಿ ನಡೆಸಲು ಸೇರಿದ ನೂರಾರು ರೈತರು ಪ್ರತಿಭಟನಾ ಸ್ಥಳದಿಂದ ತೆರವುಗೊಳ್ಳುವುದಾಗಿ ಒಪ್ಪಿಕೊಂಡ ಬಳಿಕ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್ ವೇಯಲ್ಲಿ ಸಂಚಾರವನ್ನು ಸೋಮವಾರ ಮರು ಆರಂಭಿಸಲಾಯಿತು.
ನೋಯ್ಡಾ ಆಡಳಿತದೊಂದಿಗೆ ಸಭೆ ನಡೆಸಿದ ಬಳಿಕ ಪ್ರತಿಭಟನೆಗಳ ನೇತೃತ್ವ ವಹಿಸುತ್ತಿರುವ ಭಾರತೀಯ ಕಿಸಾನ್ ಪರಿಷತ್ (ಬಿಕೆಪಿ) ನಾಯಕ ಸುಖ್‌ಬೀರ್ ಖಲೀಫಾ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರಕ್ಕೆ ಒಂದು ವಾರಗಳ ಸಮಯಾವಕಾಶ ನೀಡಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನೋಯ್ಡಾ ಲಿಂಕ್ ರಸ್ತೆಯ ದಲಿತ ಪ್ರೇರಣಾ ಸ್ಥಳ (ಅಂಬೇಡ್ಕರ್ ಪಾರ್ಕ್)ಕ್ಕೆ ಸ್ಥಳಾಂತರಗೊಳಿಸಿದರು. ಆದರೆ, ತಮ್ಮ ಬೇಡಿಕೆ ಸೂಕ್ತ ಸಮಯದಲ್ಲಿ ಈಡೇರದೇ ಇದ್ದರೆ, ದಿಲ್ಲಿ ರ‍್ಯಾಲಿ ಮರು ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೋಮವಾರ ಬೆಳಗ್ಗೆ ಉತ್ತರಪ್ರದೇಶದ ರೈತರು ಸಂಸತ್ ಭವನದತ್ತ ರ‍್ಯಾಲಿ ನಡೆಸುವುದನ್ನು ತಡೆಯಲು ಪೊಲೀಸರು ಹಲವು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಇದರಿಂದ ದಿಲ್ಲಿ-ನೋಯ್ಡಾ ಗಡಿ ದಾಟುವಿನಲ್ಲಿ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.