EBM News Kannada
Leading News Portal in Kannada

ಜನ ಕಲ್ಯಾಣದ ಬದಲು ಶಸ್ತ್ರಾಸ್ತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಶುಭಾಶಯಗಳು : ಅಡ್ಮಿರಲ್ ದಿನೇಶ್ ತ್ರಿಪಾಠಿ ವ್ಯಂಗ್ಯ

0


ಹೊಸದಿಲ್ಲಿ : “ಜನ ಕಲ್ಯಾಣದ ಬದಲು ಶಸ್ತ್ರಾಸ್ತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಶುಭಾಶಯಗಳು” ಎಂದು ಮುಂದಿನ ಒಂದು ದಶಕದೊಳಗೆ 50 ಯುದ್ಧನೌಕೆಗಳನ್ನು ಹೊಂದುವ ಮಹತ್ವಾಕಾಂಕ್ಷಿ ಯೋಜನೆ ಹೊಂದಿರುವ ಪಾಕಿಸ್ತಾನದ ಕುರಿತು ಕೇಳಲಾದ ಪ್ರಶ್ನೆಗೆ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ವ್ಯಂಗ್ಯವಾಡಿದರು.

ಸೋಮವಾರ ನೌಕಾಪಡೆ ದಿನಾಚರಣೆಗೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿನೇಶ್ ತ್ರಿಪಾಠಿ, “ಪಾಕಿಸ್ತಾನ ನೌಕಾಪಡೆಯ ಅಚ್ಚರಿಯ ಬೆಳವಣಿಗೆ ಕುರಿತು ನಮಗೆ ತಿಳಿದಿದೆ. ಅವರು ಮಂದಿನ ಒಂದು ದಶಕದೊಳಗೆ 50 ಯುದ್ಧನೌಕೆಗಳ ಪಡೆಯಾಗುವ ಗುರಿ ಹೊಂದಿದ್ದಾರೆ. ಪಾಕಿಸ್ತಾನದ ಆರ್ಥಿಕತೆಯನ್ನು ಗಮನಿಸಿದರೆ, ಅವರು ಇಷ್ಟೊಂದು ಹಡಗುಗಳು ಹಾಗೂ ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿರುವುದು ಅಚ್ಚರಿದಾಯಕವಾಗಿದೆ” ಎಂದು ಹೇಳಿದರು.

“ಅವರು ತಮ್ಮ ಜನರ ಕಲ್ಯಾಣಕ್ಕೆ ಬದಲು ಶಸ್ತ್ರಾಸ್ತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ, ಅವರಿಗೆ ಶುಭಾಶಯಗಳು” ಎಂದು ಅವರು ಹಾರೈಸಿದರು.

ಚೀನಾ ಬೆಂಬಲದೊಂದಿಗೆ ತನ್ನ ನೌಕಾಬಲಕ್ಕೆ 20 ಪ್ರಮುಖ ಯುದ್ಧನೌಕೆಗಳು ಸೇರಿದಂತೆ ಇನ್ನೂ 50ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ಯೋಜನೆಯನ್ನು ಪಾಕಿಸ್ತಾನ ನೌಕಾಪಡೆ ಪ್ರಕಟಿಸಿದೆ. ಇದರೊಂದಿಗೆ, ತಮ್ಮ ಕೆಲವು ನೌಕೆಗಳಿಗೆ ಟರ್ಕಿ ಮತ್ತು ರೊಮಾನಿಯಾದಿಂದ ಕೆಲವು ಹಡಗುಗಳನ್ನು ಖರೀದಿಸುವ ಯೋಜನೆಯನ್ನೂ ಹೊಂದಿದೆ. ಅಲ್ಲದೆ, ಜಿನ್ನಾ ದರ್ಜೆಯ ಪ್ರಪ್ರಥಮ ಸ್ವದೇಶಿ ಯುದ್ಧನೌಕೆಯನ್ನು ನಿರ್ಮಿಸುವ ಯೋಜನೆಯನ್ನೂ ಪಾಕಿಸ್ತಾನ ಹೊಂದಿದೆ.

Leave A Reply

Your email address will not be published.