ಹೊಸದಿಲ್ಲಿ: ಕಾನೂನು ಸುವ್ಯವಸ್ಥೆ ಭಂಗಗೊಳ್ಳುವ ಸಾಧ್ಯತೆ ಇರುವುದರಿಂದ, ಹಿಂಸಾಚಾರ ಪೀಡಿತ ಸಂಭಲ್ ಗೆ ನೀಡಲು ಉದ್ದೇಶಿಸಿರುವ ಭೇಟಿಯನ್ನು ಮುಂದೂಡುವಂತೆ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಆದರೆ, ಪೊಲೀಸರ ಈ ಆದೇಶವನ್ನು ಧಿಕ್ಕರಿಸುವುದಾಗಿ ಹೇಳಿರುವ ಅಜಯ್ ರಾಯ್, ಸೋಮವಾರದಂದು ಹಿಂಸಾಚಾರ ಪೀಡಿತ ಸಂಭಲ್ ಗೆ ಭಾರಿ ಭದ್ರತಾ ಕ್ರಮಗಳ ಹೊರತಾಗಿಯೂ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಜಯ್ ರಾಯ್, “ಅವರು ನನಗೆ ನೋಟಿಸ್ ಜಾರಿಗೊಳಿಸಿದ್ದು, ಭೇಟಿಯನ್ನು ಮುಂದೂಡುವಂತೆ ಸೂಚಿಸಿದ್ದಾರೆ. ಆದರೆ, ನಾವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಹಾಗೂ ಪೊಲೀಸರು ಮತ್ತು ಸರಕಾರ ನಡೆಸಿರುವ ದೌರ್ಜನ್ಯದ ಕುರಿತು ತಿಳಿದುಕೊಳ್ಳಲು ಶಾಂತಿಯುತ ಭೇಟಿ ನೀಡಲಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಹೊರಗಿನವರು ಸಂಭಲ್ ಗೆ ಪ್ರವೇಶಿಸದಂತೆ ವಿಧಿಸಲಾಗಿರುವ ನಿಷೇಧವನ್ನು ಡಿಸೆಂಬರ್ 10ರವರೆಗೆ ವಿಸ್ತರಿಸಿರುವ ಜಿಲ್ಲಾಡಳಿತದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್, ನಮ್ಮ ಸತ್ಯಶೋಧನಾ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಲು ಬಿಜೆಪಿ ನೇತೃತ್ವದ ಸರಕಾರ ನಿರ್ಬಂಧಗಳನ್ನು ವಿಸ್ತರಿಸಿದೆ ಎಂದು ಆರೋಪಿಸಿದೆ. ನಾನು ನನ್ನ ಪ್ರವಾಸವನ್ನು ಮುಂದುವರಿಸಲಿದ್ದೇನೆ ಎಂದು ಶಪಥ ಮಾಡಿರುವ ಅಜಯ್ ರಾಯ್, ಪೊಲೀಸರ ಬರ್ಬರತೆ ಹಾಗೂ ಸರಕಾರದ ಅನ್ಯಾಯದ ಆರೋಪಗಳ ಕುರಿತು ತನಿಖೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
“ಸತ್ಯ ಹೊರಗೆ ಬರುತ್ತದೆ ಎಂದು ಸರಕಾರ ಭಯಭೀತಗೊಂಡಿದೆ. ಹೀಗಾಗಿ, ಅವರು ನಮ್ಮನ್ನು ತಡೆಯಲು ಯತ್ನಿಸಲಿದ್ದಾರೆ. ಹೀಗಿದ್ದೂ, ನಾವು ಅಲ್ಲಿಗೆ ಹೋಗಲು ಪ್ರಯತ್ನಿಸುತ್ತೇವೆ. ಅವರೆಷ್ಟೇ ಮಂದಿ ಪೊಲೀಸರನ್ನು ನಿಯೋಜಿಸಿದರೂ, ನಾವು ಸಂಭಲ್ ಗೆ ಹೋಗಿಯೇ ತೀರುತ್ತೇವೆ” ಎಂದು ಅವರು ಸವಾಲೆಸೆದಿದ್ದಾರೆ.
ಈ ನಡುವೆ, ಅಜಯ್ ರಾಯ್ ಗೆ ಪೊಲೀಸರು ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್, “ಅವರಿಗೆ ಯಾರೂ ಸಂಭಲ್ ಗೆ ಹೋಗುವುದು ಬೇಕಿಲ್ಲ. ಯಾರು ಪಾಪಗಳನ್ನು ಮಾಡುತ್ತಾರೆ, ಅಂಥವರು ಯಾವಾಗಲೂ ಅವನ್ನು ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ” ಎಂದು ಆದಿತ್ಯನಾಥ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.