EBM News Kannada
Leading News Portal in Kannada

FACT CHECK | ಬಿಜೆಪಿ ಬಿಡುಗಡೆಗೊಳಿಸಿರುವ ಧ್ವನಿ ಮುದ್ರಣಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದೆ : ‘ಬೂಮ್’ | FACT CHECK

0


ಮುಂಬೈ : ಮಹಾರಾಷ್ಟ್ರ ವಿಧಾನಸಭೆಗೆ ಬುಧವಾರ ಮತದಾನ ಆರಂಭಗೊಳ್ಳುವ ಕೆಲವೇ ಗಂಟೆಗಳ ಮೊದಲು, ರಾಜ್ಯದ ಪ್ರತಿಪಕ್ಷ ನಾಯಕರನ್ನು ಕೆಟ್ಟದಾಗಿ ಬಿಂಬಿಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷವು ಬಿಡುಗಡೆಗೊಳಿಸಿರುವ ಧ್ವನಿಮುದ್ರಣಗಳು ನಕಲಿಯಾಗಿವೆ ಎಂದು FACT CHECK ಪತ್ತೆಹಚ್ಚುವ ಸಂಸ್ಥೆ ‘ಬೂಮ್’ ಹೇಳಿದೆ. ಅವುಗಳನ್ನು ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜನ್ಸ್) ಸಾಧನಗಳನ್ನು ಬಳಸಿ ಸೃಷ್ಟಿಸಲಾಗಿದೆ ಎಂದು ಅದು ತಿಳಿಸಿದೆ.

‘‘ಸೋರಿಕೆಯಾಗಿರುವ ಧ್ವನಿಮುದ್ರಣಗಳು’’, ಚುನಾವಣಾ ವೆಚ್ಚಕ್ಕಾಗಿ ರಾಷ್ಟ್ರೀಯವಾದಿ ಕಾಂಗ್ರೆಸ ಪಕ್ಷ (ಶರದ್‌ಚಂದ್ರ ಪವಾರ್)ದ ನಾಯಕಿ ಸುಪ್ರಿಯಾ ಸುಳೆ, ಕಾಂಗ್ರೆಸ್ ನಾಯಕ ನಾನಾ ಪಟೋಳೆ, ಐಪಿಎಸ್ ಅಧಿಕಾರಿ ಅಮಿತಾಭ್ ಗುಪ್ತಾ ಮತ್ತು ಲೆಕ್ಕಪರಿಶೋಧನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಗೌರವ್ ಮೆಹ್ತಾ ಕ್ರಿಪ್ಟೊಕರೆನ್ಸಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ‘‘ಸಾಬೀತುಪಡಿಸಿವೆ’’ ಎಂದು ಬಿಜೆಪಿ ಹೇಳಿಕೊಂಡಿದೆ.

ಈ ಧ್ವನಿಮುದ್ರಣಗಳ ಆಧಾರದಲ್ಲಿ, ಬುಧವಾರ, ಅನುಷ್ಠಾನ ನಿರ್ದೇಶನಾಲಯವು ಛತ್ತೀಸ್‌ಗಢದ ರಾಯ್ಪುರದಲ್ಲಿರುವ ಮೆಹ್ತಾರ ಮನೆಯಲ್ಲಿ ಶೋಧ ಕಾರ್ಯಾಚರಣೆಯನ್ನೂ ಆರಂಭಿಸಿದೆ.

ಆದರೆ, ‘TrueMedia.org’ನ ಡೀಪ್‌ಫೇಕ್ ಪತ್ತೆ ಸಾಧನವನ್ನು ಬಳಸಿ ‘ಬೂಮ್’ ಈ ಧ್ವನಿ ತುಣುಕುಗಳನ್ನು ವಿಶ್ಲೇಷಿಸಿದಾಗ, ಅವುಗಳು ನಕಲಿ ಎನ್ನುವುದು ಪತ್ತೆಯಾಯಿತು. ಮುದ್ರಿತ ಧ್ವನಿ ತುಣುಕುಗಳಲ್ಲಿರುವ ಧ್ವನಿಗಳು ಮತ್ತು ಆ ತುಣುಕುಗಳಲ್ಲಿ ಸಂಭಾಷಣೆಯಲ್ಲಿ ತೊಡಗಿದ್ದಾರೆಂದು ಬಿಂಬಿಸಲಾದವರ ಸಾರ್ವಜನಿಕವಾಗಿ ಲಭ್ಯವಿರುವ ಧ್ವನಿ ಮಾದರಿಗಳನ್ನು ಹೋಲಿಸಿದಾಗ ಅವುಗಳ ನಡುವೆ ಗಮನಾರ್ಹ ವ್ಯತ್ಯಾಸಗಳು ದಾಖಲಾಗಿವೆ ಎಂದು ‘ಬೂಮ್’ ಹೇಳಿದೆ.

ಬುಧವಾರ, ರಾಜ್ಯದಲ್ಲಿ ಮತದಾನ ನಡೆಯುತ್ತಿರುವಂತೆಯೇ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ ಪ್ರತಿಪಕ್ಷ ನಾಯಕರ ವಿರುದ್ಧ ಆರೋಪಗಳನ್ನು ಮಾಡಿದರು. ಒಂದು ದಿನ ಮೊದಲು, ಅಂದರೆ ಮಂಗಳವಾರ ಇನ್ನೋರ್ವ ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಇಂಥದೇ ಪತ್ರಿಕಾಗೋಷ್ಠಿಯೊಂದನ್ನು ಮಾಡಿದ್ದರು.

ಒಂದು ತುಣುಕಿನಲ್ಲಿ, 2018ರ ಪ್ರಕರಣವೊಂದರಲ್ಲಿ ತನಿಖೆಯಿಂದ ಪಾರಾಗಲು ಬಿಟ್‌ಕಾಯಿನನ್ನು ನಗದಾಗಿ ಪರಿವರ್ತಿಸುವ ಬಗ್ಗೆ ಸುಳೆ ಮತ್ತು ಪಟೋಳೆ ಚರ್ಚಿಸುತ್ತಿರುವಂತೆ ಬಿಂಬಿಸಲಾಗಿದೆ. ಇನ್ನೊಂದು ತುಣುಕಿನಲ್ಲಿ, ಪಟೋಳೆ, ಗುಪ್ತರಿಗೆ ಬೆದರಿಕೆ ಹಾಕುವಂತೆ ಬಿಂಬಿಸಲಾಗಿದೆ.

ನಾಲ್ಕು ಧ್ವನಿ ತುಣುಕುಗಳ ಪೈಕಿ ಮೂರನ್ನು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾಗಿದೆ ಎಂದು ಬೂಮ್ ನಿರ್ಧರಿಸಿದೆ. ನಾಲ್ಕನೇಯದು ಕೇವಲ 5 ಸೆಕೆಂಡ್‌ಗಳ ತುಣುಕಾಗಿದೆ. ಅತಿ ಚಿಕ್ಕ ತುಣುಕಾಗಿರುವುದರಿಂದ ಅದರ ವಿಶ್ಲೇಷಣೆ ಅಪೂರ್ಣವಾಗಿದೆ. ಆದರೆ, ಅದು ಸಾಚಾತನದ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ ಎಂದು ವಾಸ್ತವಾಂಶ ಪತ್ತೆ ಸಂಸ್ಥೆ ತಿಳಿಸಿದೆ.

Leave A Reply

Your email address will not be published.