ಇಂಫಾಲ: ಆದೇಶವೊಂದರ ಪ್ರಕಾರ, ಮಣಿಪುರದ ಏಳು ಜಿಲ್ಲೆಗಳಲ್ಲಿ ಮತ್ತೆ ಮೂರು ದಿನ ಮೊಬೈಲ್ ಅಂತರ್ಜಾಲ ಸೇವೆ ಮೇಲಿನ ಅಮಾನತನ್ನು ಮಣಿಪುರ ಸರಕಾರ ವಿಸ್ತರಿಸಿದೆ.
ಉಲ್ಬಣಗೊಂಡಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ, ಸಮಾಜ ವಿರೋಧಿ ಶಕ್ತಿಗಳು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುವಂಥ ತುಣುಕುಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ನವೆಂಬರ್ 16ರಿಂದ ಎರಡು ದಿನಗಳ ಕಾಲ ಅಂತರ್ಜಾಲ ಸೇವೆಯನ್ನು ಅಮಾನತುಗೊಳಿಸಲಾಗಿತ್ತು. ಸೋಮವಾರ ಮತ್ತೆರಡು ದಿನಗಳ ಕಾಲ ವಿಸ್ತರಿಸಲಾಗಿತ್ತು.
“ಮುಂದುವರಿದಿರುವ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯ ಕಾರಣಕ್ಕೆ ಪಶ್ಚಿಮ ಇಂಫಾಲ, ಪೂರ್ವ ಇಂಫಾಲ, ಕಾಕ್ಚಿಂಗ್, ಬಿಷ್ಣುಪರ್, ತೌಬಾಲ್, ಚೂರ್ ಚಂದ್ ಪುರ್ ಹಾಗೂ ಕಾಂಗ್ಪೋಕ್ಪಿ ಪ್ರಾಂತ್ಯಗಳ ವ್ಯಾಪ್ತಿಯಲ್ಲಿ ಮೊಬೈಲ್ ಅಂತರ್ಜಾಲ ಸೇವೆ ಅಮಾನತನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ, ನವೆಂಬರ್ 16ರಂದು ಬ್ರಾಡ್ ಬ್ಯಾಂಡ್ ಹಾಗೂ ಮೊಬೈಲ್ ಅಂತರ್ಜಾಲ ಸೇವೆಗಳೆರಡನ್ನೂ ಮಣಿಪುರ ಸರಕಾರ ಅಮಾನತುಗೊಳಿಸಿತ್ತು.
ಆದರೆ, ಬ್ರಾಡ್ ಬ್ಯಾಂಡ್ ಸೇವೆಯನ್ನು ಅಮಾನತುಗೊಳಿಸಿದ್ದರಿಂದ ಜನಸಾಮಾನ್ಯರು, ಆರೋಗ್ಯ ಸೇವಾ ಸೌಕರ್ಯಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಇನ್ನಿತರ ಕಚೇರಿಗಳು ಎದುರಿಸಿದ ಸಮಸ್ಯೆಯನ್ನು ಪರಿಗಣಿಸಿ ಮಂಗಳವಾರ ಬ್ರಾಡ್ ಬ್ಯಾಂಡ್ ಸೇವೆಯ ಮೇಲಿನ ನಿರ್ಬಂಧವನ್ನು ಹಿಂಪಡೆಯಲಾಗಿತ್ತು.