ಹೊಸದಿಲ್ಲಿ: ಯುನಿಸೆಫ್ ವರದಿಯೊಂದರ ಪ್ರಕಾರ, 2050ರ ವೇಳೆಗೆ ಭಾರತದಲ್ಲಿ 35 ಕೋಟಿ ಮಕ್ಕಳಿರಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರ ಸ್ವಾಸ್ಥ್ಯ ಮತ್ತು ಹಕ್ಕುಗಳನ್ನು ಖಾತರಿಪಡಿಸಲು ತೀವ್ರ ಸ್ವರೂಪದ ಹವಾಮಾನ ಮತ್ತು ಪರಿಸರಾತ್ಮಕ ಅಪಾಯಗಳನ್ನು ಎದುರಿಸಲು ಸನ್ನದ್ಧವಾಗಿರಬೇಕು ಎಂದು ಎಚ್ಚರಿಸಲಾಗಿದೆ.
ಈಗಿನ ಸ್ಥಿತಿಗೆ ಹೋಲಿಸಿದರೆ, ಭಾರತದ ಮಕ್ಕಳ ಸಂಖ್ಯೆಯಲ್ಲಿ 10.6 ಕೋಟಿ ಇಳಿಕೆಯಾಗಲಿದ್ದರೂ, ಜಾಗತಿಕ ಮಕ್ಕಳ ಜನಸಂಖ್ಯೆಯಲ್ಲಿ ಆಗಲೂ ಶೇ. 15ರಷ್ಟು ಮಕ್ಕಳನ್ನು ಹೊಂದಿರಲಿದೆ ಎಂದು ವರದಿ ಒತ್ತಿ ಹೇಳಿದೆ.
ಯುನಿಸೆಫ್ ನ ಮಹತ್ವಾಕಾಂಕ್ಷಿ 2024ರ ಜಾಗತಿಕ ಮಕ್ಕಳ ಸ್ಥಿತಿಗತಿ ವರದಿ, “The Future of Children in a Changing World” ಅನ್ನು ಬುಧವಾರ ಹೊಸ ದಿಲ್ಲಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ವರದಿಯಲ್ಲಿ 2050ರ ವೇಳೆಗೆ ಮಕ್ಕಳನ್ನು ರೂಪಿಸಲಿರುವ ಮೂರು ಜಾಗತಿಕ ಪ್ರವೃತ್ತಿಗಳಾದ ವಾಸಸ್ಥಳ ಬದಲಾವಣೆ, ಹವಾಮಾನ ಬಿಕ್ಕಟ್ಟು ಹಾಗೂ ಭೌಗೋಳಿಕ ತಂತ್ರಜ್ಞಾನಗಳ ಮೇಲೆ ಬೆಳಕು ಚೆಲ್ಲಲಾಗಿದೆ.
ಈ ವರದಿಯನ್ನು ದಿ ಎನರ್ಜಿ ಇನ್ಸ್ಟಿಟ್ಯೂಟ್ ನ ಸುರುಚಿ ಭದ್ವಾಲ್, ಯುನಿಸೆಫ್ ಯುವ ವಕೀಲ ಕಾರ್ತಿಕ್ ವರ್ಮರೊಂದಿಗೆ ಯುನಿಸೆಫ್ ನ ಭಾರತೀಯ ಪ್ರತಿನಿಧಿ ಸಿಂಥಿಯಾ ಮೆಕ್ ಕೆಫ್ರಿ ಬಿಡುಗಡೆಗೊಳಿಸಿದರು.
2050ರ ದಶಕದಲ್ಲಿ ತೀವ್ರ ಹವಾಮಾನ ಮತ್ತು ಪರಿಸರಾತ್ಮಕ ಅಪಾಯಗಳಿಗೆ ಮಕ್ಕಳು ಒಡ್ಡಿಕೊಳ್ಳುವುದು ನಾಟಕೀಯವಾಗಿ ಏರಿಕೆಯಾಗಲಿದೆ. 2000ದ ದಶಕದಲ್ಲಿ ಉಷ್ಣಮಾರುತಕ್ಕೆ ಒಡ್ಡಿಕೊಂಡ ಮಕ್ಕಳಿಗೆ ಹೋಲಿಸಿದರೆ, 2050ರ ದಶಕದಲ್ಲಿ ಈ ಪ್ರಮಾಣ ಎಂಟು ಪಟ್ಟು ಅಧಿಕವಾಗಲಿದೆ ಎಂದೂ ವರದಿಯಲ್ಲಿ ಎಚ್ಚರಿಸಲಾಗಿದೆ.
ಈ ಹವಾಮಾನ ಮತ್ತು ಪರಿಸರಾತ್ಮಕ ಬಿಕ್ಕಟ್ಟು ಕಡಿಮೆ ಆದಾಯ ಹೊಂದಿರುವ ದೇಶಗಳು, ನಿರ್ದಿಷ್ಟವಾಗಿ ಆಫ್ರಿಕಾದಲ್ಲಿನ ಮಕ್ಕಳ ಜೀವನ ಸ್ಥಿತಿಯೊಂದಿಗೆ ಉಲ್ಬಣಗೊಳ್ಳಲಿದೆ. ಇಂತಹ ದೇಶಗಳಲ್ಲಿ ಗಮನಾರ್ಹ ವ್ಯೂಹಾತ್ಮಕ ಹೂಡಿಕೆಗಳ ಕೊರತೆ ಇರುವುದರಿಂದ, ಇಂತಹ ಸವಾಲುಗಳ್ನು ಎದುರಿಸಲು ಸಂಪನ್ಮೂಲಗಳು ಸೀಮಿತವಾಗಿರಲಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.