“ಮದ್ಯ ನಿಷೇಧ ಮಾಡಿದರೆ, ಅದರ ಬಗ್ಗೆ ಹಾಡುವುದನ್ನು ನಿಲ್ಲಿಸ್ತೇನೆ”: ತೆಲಂಗಾಣ ಸರಕಾರಕ್ಕೆ ಸವಾಲು ಹಾಕಿದ ಗಾಯಕ ದಿಲ್ಜಿತ್ ದೊಸಾಂಜ್
ಹೊಸದಿಲ್ಲಿ: ಮದ್ಯ ನಿಷೇಧ ಮಾಡಿದ ದಿನವೇ ಮದ್ಯದ ಬಗ್ಗೆ ಹಾಡುಗಳನ್ನು ಹಾಡುವುದನ್ನು ನಿಲ್ಲಿಸುತ್ತೇನೆ ಎಂದು ಮದ್ಯ, ಡ್ರಗ್ಸ್ ಕುರಿತಾದ ಹಾಡುಗಳನ್ನು ವೇದಿಕೆಯಲ್ಲಿ ಹಾಡುವಂತಿಲ್ಲ ಎಂದು ತೆಲಂಗಾಣ ಸರಕಾರ ನೀಡಿದ ನೊಟೀಸ್ ಗೆ ಪಂಜಾಬಿ ಗಾಯಕ ದಿಲ್ಜಿತ್ ದೊಸಾಂಜ್ ಪ್ರತಿಕ್ರಿಯಿಸಿದ್ದಾರೆ.
ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಮದ್ಯ, ಡ್ರಗ್ಸ್ ಕುರಿತಾದ ಹಾಡುಗಳನ್ನು ವೇದಿಕೆಯಲ್ಲಿ ಹಾಡುವಂತಿಲ್ಲ ಎಂದು ನೀಡಿದ್ದ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವಂತೆ ತೆಲಂಗಾಣ ಸರಕಾರಕ್ಕೆ ಸವಾಲು ಹಾಕಿದ್ದಾರೆ.
Let’s start Dry Nation Movement Ahmedabad pic.twitter.com/K5RfuSn2Kx
— DILJIT DOSANJH (@diljitdosanjh) November 17, 2024
ದಿಲ್ಜಿತ್ ಹೈದರಾಬಾದ್ನಲ್ಲಿನ ಶೋಗೆ ಮೊದಲು ಸರ್ಕಾರ ನೊಟೀಸ್ ನೀಡಿ ಡ್ರಗ್ಸ್, ಮದ್ಯ, ಹಿಂಸೆಯ ಕುರಿತಾದ ಹಾಡುಗಳನ್ನು ವೇದಿಕೆಯಲ್ಲಿ ಹಾಡುವಂತಿಲ್ಲ ಎಂದು ತೆಲಂಗಾಣ ಸರ್ಕಾರ ಸೂಚಿಸಿತ್ತು. ಅಲ್ಲದೆ ವೇದಿಕೆ ಮೇಲೆ ಮಕ್ಕಳನ್ನು ಕರೆತರುವಂತಿಲ್ಲ, ಇದು ಡಬ್ಲುಎಚ್ಓ ನಿಯಮಕ್ಕೆ ವಿರುದ್ಧವಾಗಿರಲಿದೆ ಎಂದು ಸಹ ಸರ್ಕಾರ ಎಚ್ಚರಿಕೆ ನೀಡಿತ್ತು.
ದಿಲ್ಜಿತ್ ದೊಸ್ಸಾಂಜ್, ‘ದಿಲ್ಲುಮಿನಾಟಿ’ ಹೆಸರಿನ ಲೈವ್ ಕಾನ್ಸರ್ಟ್ ಟೂರ್ ಮಾಡುತ್ತಿದ್ದಾರೆ. ಭಾರತದ ಹಲವು ನಗರಗಳಲ್ಲಿ ತಮ್ಮ ಶೋ ನಡೆಸಿಕೊಡಲಿದ್ದಾರೆ. ಈ ಹಿಂದೆ ದಿಲ್ಲಿ, ಜೈಪುರ ಹಾಗೂ ಚಂಡೀಘಡಗಳಲ್ಲಿ ಶೋ ಮಾಡಿದ್ದು, ಆ ಶೋಗಳಲ್ಲಿ ಡ್ರಗ್ಸ್, ಮದ್ಯ, ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ಹಾಡಿದ್ದರು. ಈ ಬಗ್ಗೆ ಟ್ವಿಟ್ಟರ್ ಬಳಕೆದಾರರೊಬ್ಬರು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಇದೇ ಕಾರಣಕ್ಕೆ ತೆಲಂಗಾಣ ಸರ್ಕಾರ, ಮಾದಕ ವಸ್ತು, ಮದ್ಯ ಸೇವನೆ ಮತ್ತು ಹಿಂಸೆಯನ್ನು ವೈಭವೀಕರಿಸುವ ಹಾಡುಗಳನ್ನು ಹಾಡಬಾರದೆಂದು ಎಚ್ಚರಿಕೆ ನೀಡಿತ್ತು.
ಅಹ್ಮದಾಬಾದ್ ನಲ್ಲಿನ ಶೋದಲ್ಲಿ ಮಾತನಾಡಿದ ದಿಲ್ಜಿತ್ ದೋಸಾಂಜ್, ಇಂದು ಒಳ್ಳೆಯ ಸುದ್ದಿ ಇದೆ. ಇಂದು ನನಗೆ ಯಾವುದೇ ಸೂಚನೆ ಬಂದಿಲ್ಲ. ಏಕೆಂದರೆ ಗುಜರಾತ್ ‘ಶುಷ್ಕ’ ರಾಜ್ಯವಾಗಿದೆ (ಅಂದರೆ ಅಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ). ಆದ್ದರಿಂದ ಮದ್ಯದ ಬಗ್ಗೆ ನಾನು ಇಲ್ಲಿ ಹಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಗುಜರಾತ್ ನಲ್ಲಿ ಮದ್ಯಪಾನ ನಿಷೇಧದ ಬಗ್ಗೆ ಸಭಿಕರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದ ನಂತರ ಗುಜರಾತ್ ಸರ್ಕಾರವು ನಿಜವಾಗಿಯೂ ಮದ್ಯ ನಿಷೇಧವನ್ನು ಜಾರಿಗೆ ತಂದಿದ್ದರೆ ಅದನ್ನು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ.