ಅರುಣಾಚಲ ಪ್ರದೇಶ | ವೇದಿಕೆಯಲ್ಲಿ ಕೋಳಿಯನ್ನು ಕೊಂದು ರಕ್ತ ಹೀರಿದ್ದ ಕಲಾವಿದನ ವಿರುದ್ಧ ಪ್ರಕರಣ | Arunachal Pradesh
ಇಟಾನಗರ : ಇತ್ತೀಚಿಗೆ ಇಟಾನಗರದಲ್ಲಿ ಪ್ರದರ್ಶನದ ಸಮಯದಲ್ಲಿ ವೇದಿಕೆಯಲ್ಲಿಯೇ ಕೋಳಿಯ ಕತ್ತನ್ನು ಸೀಳಿ ರಕ್ತವನ್ನು ಕುಡಿದಿದ್ದ ಜಾನಪದ ಸಂಗೀತ ಕಲಾವಿದ ಕೋನ್ ವಾಲಿ ಸನ್ ವಿರುದ್ಧ ಪೋಲಿಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಪ್ರಾಣಿಗಳಿಗೆ ಕ್ರೌರ್ಯ ತಡೆ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಿದ್ದಾರೆ. ಪೆಟಾ ಇಂಡಿಯಾ ಈ ಬಗ್ಗೆ ದೂರು ಸಲ್ಲಿಸಿತ್ತು.
ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯ ಸೆಪಾ ನಿವಾಸಿ ಕೋನ್ ವಾಲಿ ಸನ್ ಅವರು ಜಾನಪದ ಕಲಾವಿದ, ಗೀತ ರಚನೆಕಾರ, ಸಂಯೋಜಕ ಮತ್ತು ಸಂಗೀತಕಾರ ಎಂದು ಗುರುತಿಸಿಕೊಂಡಿದ್ದಾರೆ.
ಅ.28ರಂದು ರಂಗ ಪ್ರದರ್ಶನದ ಸಂದರ್ಭದಲ್ಲಿ ಸನ್, ಕೋಳಿಯನ್ನು ಕೊಂದು ಅದರ ರಕ್ತವನ್ನು ಸೇವಿಸಿದ ಬಳಿಕ ಇಟಾನಗರದಲ್ಲಿ ವಿವಾದವು ಭುಗಿಲೆದ್ದಿತ್ತು. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು,ಸನ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.
ಪ್ರಾಣಿಗಳ ಶೋಷಣೆಯು ತೀವ್ರ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುತ್ತದೆ. ಹೀಗಾಗಿ ಪ್ರಾಣಿಗಳನ್ನು ಶೋಷಿಸುವವರನ್ನು ಮಾನಸಿಕ ಮೌಲ್ಯಮಾಪನಕ್ಕೊಳಪಡಿಸಬೇಕು ಮತ್ತು ಸಮಾಲೋಚನೆಯನ್ನು ಒದಗಿಸಬೇಕು ಎಂದು ಪೆಟಾ ಶಿಫಾರಸು ಮಾಡಿದೆ.
ಪ್ರಾಣಿಗಳ ಮೇಲೆ ಕ್ರೌರ್ಯ ನಡೆಸುವವರು ಹೆಚ್ಚಾಗಿ ಪುನರಾವರ್ತಿತ ಅಪರಾಧಿಗಳಾಗಿದ್ದು ಇತರ ಪ್ರಾಣಿಗಳಿಗೆ, ಮನುಷ್ಯರಿಗೂ ಹಾನಿಯನ್ನು ಮಾಡುತ್ತಾರೆ ಎನ್ನುವುದನ್ನು ಸಂಶೋಧನೆಯು ತೋರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಪೆಟಾ, ಪ್ರಾಣಿಗಳ ಮೇಲೆ ಕ್ರೌರ್ಯವನ್ನು ಎಸಗುವವರು ಕೊಲೆ, ಅತ್ಯಾಚಾರ, ದರೋಡೆ, ಹಲ್ಲೆ, ಕಿರುಕಕುಳ, ಬೆದರಿಕೆ ಮತ್ತು ಮಾದಕ ದ್ರವ್ಯ ಸೇವನೆ ಸೇರಿದಂತೆ ಇತರ ಅಪರಾಧಗಳನ್ನು ನಡೆಸುವ ಸಾಧ್ಯತೆ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂದು ಫಾರೆನ್ಸಿಕ್ ರೀಸರ್ಚ್ ಆ್ಯಂಡ್ ಕ್ರಿಮಿನಾಲಜಿ ಇಂಟರ್ನ್ಯಾಷನಲ್ ಜರ್ನಲ್ನಲ್ಲಿ ಪ್ರಕಟಿತ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಹೇಳಿದೆ.