EBM News Kannada
Leading News Portal in Kannada

ಕೇರಳ | ವಿಮಾನ ಪ್ರಯಾಣ ತಪ್ಪಿಸಿಕೊಳ್ಳಲು ಹುಸಿ ಬಾಂಬ್ ಬೆದರಿಕೆ ಹಾಕಿದಾತನ ಬಂಧನ

0


ಮಲಪ್ಪುರಂ: ಜಿಲ್ಲೆಯ ಕರಿಪ್ಫೂರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಹೊರಟಿದ್ದ ಏರ್ ಅರೇಬಿಯಾ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆಯೊಡ್ಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆರೋಪಿಯನ್ನು ನೆರೆಯ ಪಾಲಕ್ಕಾಡ್ ಜಿಲ್ಲೆಯ ಮುಹಮ್ಮದ್ ಇಜಾಝ್ (26) ಎಂದು ಗುರುತಿಸಲಾಗಿದೆ.

ಕೋಝಿಕ್ಕೋಡ್‌ನಿಂದ ಅಬುಧಾಬಿಗೆ ಹೋಗುವ ಏರ್ ಅರೇಬಿಯಾ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಇಜಾಝ್ ನಿಂದ ಮಂಗಳವಾರ ಸಂಜೆ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಈಮೇಲ್ ಬಂದಿದೆ ಎಂದು ಕರಿಪ್ಫೂರ್ ಪೊಲೀಸರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳ ದೂರಿನಂತೆ, ಬಾಂಬ್ ಬೆದರಿಕೆಯ ಮೂಲವನ್ನು ಹುಡುಕಲು ಪೊಲೀಸರು ತಕ್ಷಣವೇ ಪ್ರಾರಂಭಿಸಿದ್ದಾರೆ. ಸೈಬರ್ ಪೊಲೀಸರ ಸಹಾಯದಿಂದ ಪಾಲಕ್ಕಾಡ್ ಜಿಲ್ಲೆಯ ಮುಹಮ್ಮದ್ ಇಜಾಝ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

“ ಅದೇ ವಿಮಾನದಲ್ಲಿ ದುಬೈಗೆ ಪ್ರಯಾಣಿಸಬೇಕಿದ್ದ ಆರೋಪಿಯನ್ನು ವಿಮಾನ ನಿಲ್ದಾಣದಿಂದಲೇ ವಶಕ್ಕೆ ಪಡೆದುಕೊಳ್ಳಲಾಯಿತು. ವಿಮಾನಯಾನವನ್ನು ರದ್ದುಗೊಳಿಸುವುದು ಆತನ ಏಕೈಕ ಉದ್ದೇಶವಾಗಿತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಇಜಾಝ್‌ಗೆ ಕೆಲವು ಹಣಕಾಸಿನ ಸಮಸ್ಯೆಗಳಿದ್ದು, ಆತನಿಗೆ ದುಬೈಗೆ ಹೋಗಲು ಇಷ್ಟವಿರಲ್ಲಿಲ್ಲ. ಸ್ನೇಹಿತರ ಒತ್ತಡಕ್ಕೆ ಮಣಿದು ಆತ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಬೇಕಾಯಿತು. ಆತ ತನ್ನ ಪ್ರಯಾಣವನ್ನು ರದ್ದುಗೊಳಿಸಲು ಬಯಸಿದ್ದನು. ಅದಕ್ಕಾಗಿಯೇ ಹುಸಿ ಬಾಂಬ್ ಬೆದರಿಕೆಯನ್ನು ಕಳುಹಿಸಿದ್ದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಯ ವಿರುದ್ಧ ನಾಗರಿಕ ವಿಮಾನಯಾನ ಕಾಯಿದೆ, ಬಿಎನ್‌ಎಸ್ ಮತ್ತು ಕೇರಳ ಪೊಲೀಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.