ಹೊಸದಿಲ್ಲಿ: ಬಾಬಾ ಸಿದ್ದಿಕ್ ಹತ್ಯೆಯ ಹೊಣೆ ಹೊತ್ತಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, ಬಾಲಿವುಡ್ ತಾರೆ ಸಲ್ಮಾನ್ ಖಾನ್ ಅವರಿಗೆ ನೆರವು ನೀಡುವವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಈಗಾಗಲೇ ಖಾನ್ ನಿವಾಸದ ಬಳಿ ಎಚ್ಚರಿಕೆಯ ಸಂದೇಶವಾಗಿ ಗುಂಡು ಹಾರಿಸಿರುವ ಗ್ಯಾಂಗ್ ಈ ಸೂಚನೆ ನೀಡಿದೆ.
ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕ್ ಅವರನ್ನು ಪುತ್ರ ಹಾಗೂ ಶಾಸಕ ಝೀಶನ್ ಸಿದ್ದಿಕ್ ಅವರ ಕಚೇರಿ ಬಳಿ ಹತ್ಯೆ ಮಾಡಿದ ಬಳಿಕ ಈ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಭಾನುವಾರ ಶುಬ್ಬೂ ಲೋನ್ಕರ್ ಎಂಬಾತನ ಫೇಸ್ ಬುಕ್ ಪೋಸ್ಟ್ ನಿಂದ ಇದು ದೃಢಪಟ್ಟಿತ್ತು.
ಲೋನ್ಕರ್ ಈಗಾಗಲೇ ಜೈಲಿನಲ್ಲಿದ್ದು, ಆತನ ಸಹೋದರ ಪ್ರವೀಣ ಲೋನ್ಕರ್ ಈ ಪೋಸ್ಟ್ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನೂ ಭಾನುವಾರ ಸಂಜೆ ಬಂಧಿಸಲಾಗಿದೆ.
“ನಮಗೆ ಯಾರ ಮೇಲೂ ದ್ವೇಷಭಾವನೆ ಇಲ್ಲ. ಆದರೆ ಸಲ್ಮಾನ್ ಖಾನ್ ಮತ್ತು ದಾವೂದ್ ಗ್ಯಾಂಗ್ ಗೆ ಯಾರು ನೆರವು ನೀಡುತ್ತಾರೋ, ಅಂಥವರು ಎಚ್ಚರಿಕೆಯಿಂದ ಇರಿ (ಹಿಸಾಬ್-ಕಿತಾಬ್ ಕರ್ ಲೇನಾ) ಎಂದು ಹಿಂದಿಯಲ್ಲಿ ಬರೆದ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾನೆ. ಈ ಪೋಸ್ಟ್ ನ ಅಧಿಕೃತತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವೈಭವೋಪೇತ ಸಂತೋಷಕೂಟಗಳನ್ನು ಆಯೋಜಿಸುವ ಮೂಲಕ ಹೆಸರು ಮಾಡಿದ್ದ ಸಿದ್ದಿಕ್, 2013ರಲ್ಲಿ ಸಲ್ಮಾನ್ ಖಾನ್ ಮತ್ತು ಶಾರೂಕ್ ಖಾನ್ ನಡುವೆ ಐದು ವರ್ಷಗಳಿಂದ ಇದ್ದ ಶೀತಲ ಸಮರವನ್ನು ಇಫ್ತಾರ್ ಕೂಟವೊಂದರ ಮೂಲಕ ಬಗೆಹರಿಸಿದ್ದರು.
ಕಳೆದ ವರ್ಷದಿಂದೀಚೆಗೆ ಸಲ್ಮಾನ್ ಖಾನ್ ಅವರಿಗೆ ನಿಕಟವಾಗಿದ್ದ ಇಬ್ಬರು ಸೆಲೆಬ್ರಿಟಿಗಳ ಮೇಲೆ ಬಿಷ್ಣೋಯಿ ಗ್ಯಾಂಗ್ ದಾಳಿ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ. ಶನಿವಾರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಸಿದ್ದಿಕ್ ಅವರಿದ್ದ ಆಸ್ಪತ್ರೆಗೆ ಖಾನ್ ಭೇಟಿ ನೀಡಿದ್ದರು. ಜತೆಗೆ ಭಾನುವಾರ ಅವರ ನಿವಾಸಕ್ಕೂ ತೆರಳಿದ್ದರು.