ತಿರುವನಂತಪುರಂ: ಯೂಟ್ಯೂಬ್ ವಾಹಿನಿಯ ಮೂಲಕ ನಟಿಯೊಬ್ಬರ ಘನತೆಗೆ ಕುಂದುಂಟು ಮಾಡಿದ ಆರೋಪದಲ್ಲಿ ಮೂವರು ಖ್ಯಾತ ಮಲಯಾಳಂ ನಟರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನಟಿಯೊಬ್ಬರ ಘನತೆಗೆ ಕುಂದುಂಟು ಮಾಡಿದ ಆರೋಪದಲ್ಲಿ ಟಿವಿ-ಸಿನಿಮಾ ನಟಿ ಬೀನಾ ಆ್ಯಂಟೊನಿ, ಅವರ ಪತಿ ಮನೋಜ್ ಹಾಗೂ ಪ್ರಶಸ್ತಿ ವಿಜೇತ ನಟಿ ಸ್ವಸಿಕ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ನೆಡುಂಬಸ್ಸೆರಿ ಪೊಲೀಸರ ಪ್ರಕಾರ, ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಗೊಂಡ ನಂತರ, ಕೆಲವು ಮಲಯಾಳಂನ ಖ್ಯಾತ ನಟರ ವಿರುದ್ಧ ದೂರುದಾರರು ಆರೋಪ ಮಾಡಿದ್ದರು. ಇದರ ಬೆನ್ನಿಗೇ ಆ ನಟರ ವಿರುದ್ಧ ಪ್ರಕರಣ ದಾಖಲಾಗಿತ್ತು.
ನಟಿ ಬೀನಾ ಆ್ಯಂಟೊನಿ, ಅವರ ಪತಿ ಮನೋಜ್ ಹಾಗೂ ಪ್ರಶಸ್ತಿ ವಿಜೇತ ನಟಿ ಸ್ವಸಿಕ ವಿರುದ್ಧ ದೂರು ದಾಖಲಿಸಿರುವ ನಟಿಯು, ನಾನು ಕೆಲವು ಖ್ಯಾತ ನಟರ ವಿರುದ್ಧ ಆರೋಪಿಸಿದ್ದರಿಂದ, ಅದಕ್ಕೆ ಪ್ರತೀಕಾರವಾಗಿ ಅವರೆಲ್ಲ ಯೂಟ್ಯೂಬ್ ವಾಹಿನಿಯ ಮೂಲಕ ನನ್ನ ಚಾರಿತ್ರ್ಯ ವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಓರ್ವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಹಿಳೆಯರ ಘನತೆಗೆ ಕುಂದುಂಟು ಮಾಡಿದ ಆರೋಪದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79ರ ಅಡಿ ಈ ಮೂವರು ಕಲಾವಿದರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.