ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳ ಪೈಕಿ ಒಂದರಲ್ಲಿ ಭಾರತ ಕ್ರಿಕೆಟ್ ತಂಡವು ನಾಯಕ ರೋಹಿತ್ ಶರ್ಮಾರ ಸೇವೆಯಿಂದ ವಂಚಿತರಾಗುವ ಸಾಧ್ಯತೆಯಿದೆ.
ಭಾರತ ಕ್ರಿಕೆಟ್ ತಂಡವು ನವೆಂಬರ್ 22ರಿಂದ ಪರ್ತ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ರೋಹಿತ್ ಅವರು ಮೊದಲ ಟೆಸ್ಟ್ ಇಲ್ಲವೇ ಅಡಿಲೇಡ್‌ನಲ್ಲಿ ಡಿ.6ರಿಂದ 10ರ ತನಕ ನಡೆಯುವ 2ನೇ ಟೆಸ್ಟ್‌ನಿಂದ ವಂಚಿತರಾಗುವ ಸಾಧ್ಯತೆಯಿದೆ.
ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇಲ್ಲ. ವೈಯಕ್ತಿಕ ಕಾರಣಕ್ಕೆ ಸರಣಿಯ ಮೊದಲೆರಡು ಟೆಸ್ಟ್‌ಗಳ ಪೈಕಿ ಒಂದರಿಂದ ಹೊರಗುಳಿಯಬಹುದು ಎಂದು ರೋಹಿತ್ ಅವರು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ.
ಒಂದು ವೇಳೆ, ಸರಣಿ ಆರಂಭಕ್ಕೆ ಮೊದಲು ವೈಯಕ್ತಿಕ ವಿಚಾರ ಬಗೆಹರಿದರೆ ರೋಹಿತ್ ಎಲ್ಲ 5 ಟೆಸ್ಟ್‌ಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
37ರ ಹರೆಯದ ರೋಹಿತ್ ಬಾಂಗ್ಲಾದೇಶ ವಿರುದ್ಧ ಸ್ವದೇಶದಲ್ಲಿ ನಡೆದಿರುವ ಎರಡೂ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಭಾರತವು ಅ.16ರಿಂದ ನ್ಯೂಝಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗುತ್ತಿದೆ.
ರೋಹಿತ್ ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯದಿಂದ ಹೊರಗುಳಿದರೆ, ಫಾರ್ಮ್‌ನಲ್ಲಿರುವ ಅಭಿಮನ್ಯು ಈಶ್ವರನ್ ಬದಲಿ ಆಟಗಾರನಾಗಿ ಆಯ್ಕೆಯಾಗಬಹುದು.