ತಿರುವನಂತಪುರಂ: ಕೇರಳ ಕೇಡರ್ ಮಹಿಳಾ ಐಪಿಎಸ್ ಅಧಿಕಾರಿಯಾದ ಮಾಜಿ ಪೊಲೀಸ್ ಮಹಾನಿರ್ದೇಶಕಿ ಆರ್.ಶ್ರೀಲೇಖಾ ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಜಿಲ್ಲಾಧ್ಯಕ್ಷ ವಿ.ವಿ.ರಾಜೇಶ್ ಅವರಿಂದ ತಮ್ಮ ನಿವಾಸದಲ್ಲಿ ಅವರು ಬಿಜೆಪಿಯ ಸದಸ್ಯತ್ವ ಪಡೆದುಕೊಂಡರು.
ಶ್ರೀಲೇಖಾ ಅವರ ಬಿಜೆಪಿ ಸೇರ್ಪಡೆ ಕುರಿತು ಸಂತಸ ವ್ಯಕ್ತಪಡಿಸಿದ ಸುರೇಂದ್ರನ್, “ಪೊಲೀಸ್ ಅಧಿಕಾರಿಯಾಗಿ ನಿಷ್ಕಳಂಕ ದಾಖಲೆಯನ್ನು ಹೊಂದಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕಿ ಶ್ರೀಲೇಖಾರ ಅನುಭವದಿಂದ ಬಿಜೆಪಿಗೆ ದೊಡ್ಡ ಪ್ರಯೋಜನವಾಗಲಿದೆ” ಎಂದು ಅಭಿಪ್ರಾಯಪಟ್ಟರು.
ನಂತರ ಮಾತನಾಡಿದ ಶ್ರೀಲೇಖಾ, ಬಿಜೆಪಿ ನಾಯಕರು ನನ್ನನ್ನು ಪಕ್ಷ ಸೇರ್ಪಡೆಯಾಗುವಂತೆ ಸಂಪರ್ಕಿಸಿದ ನಂತರ, ಈ ಕುರಿತು ನಿರ್ಧಾರ ಕೈಗೊಳ್ಳಲು ಮೂರು ವಾರ ಹಿಡಿಯಿತು ಎಂದು ಹೇಳಿದ್ದಾರೆ. ನಾನು ಬಿಜೆಪಿ ಸೇರ್ಪಡೆಯಾಗಲು ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ ಕಾರಣ ಎಂದೂ ಅವರು ತಿಳಿಸಿದ್ದಾರೆ.