EBM News Kannada
Leading News Portal in Kannada

‘ಗಾರ್ಭಾ’, ‘ದಾಂಡಿಯಾ’ ಕಾರ್ಯಕ್ರಮ ಪ್ರವೇಶಿಸಲು ಯತ್ನಿಸಿದ ಆರೋಪ | ಯುವಕನಿಗೆ ಥಳಿಸಿದ ವಿಎಚ್‌ಪಿ ಸದಸ್ಯರು

0


ಲಕ್ನೊ : ನವರಾತ್ರಿ ಹಬ್ಬದ ಸಂದರ್ಭ ಆಯೋಜಿಸಲಾಗಿದ್ದ ‘ಗಾರ್ಭಾ, ದಾಂಡಿಯಾ’ ನೃತ್ಯ ಕಾರ್ಯಕ್ರಮಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದಲ್ಲಿ ಮುಸ್ಲಿಂ ಯುವಕನೋರ್ವನಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯರು ಥಳಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರ ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ನಗರದ ಸ್ವರೂಪ್ ನಗರ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದವರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸುವಾಗ ಭದ್ರತಾ ಸಿಬ್ಬಂದಿ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರು ಈ ಯುವಕನನ್ನು ಸೆರೆ ಹಿಡಿದರು ಎಂದು ಇಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ.

ಯುವಕನಲ್ಲಿ ಆತನ ಧರ್ಮದ ಕುರಿತು ಕೇಳಿ ತಿಳಿದ ಬಳಿಕ ಕೆಲವರು ಆತನಿಗೆ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ವೈರಲ್ ಆಗಿದೆ.

ಈ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ದಾಳಿಕೋರರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗ ದಳ ಸೇರಿದಂತೆ ಕೇಸರಿ ಸಂಘಟನೆಗಳು ಕಾನ್ಪುರದಲ್ಲಿ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾದ ಹಾಗೂ ನವರಾತ್ರಿ ಹಬ್ಬದ ಸಂದರ್ಭ ನಡೆಯುವ ‘ಗಾರ್ಭಾ’ ಹಾಗೂ ‘ದಾಂಡಿಯಾ’ ಕಾರ್ಯಕ್ರಮದಲ್ಲಿ ಹಿಂದೂ ಸಮುದಾಯಕ್ಕೆ ಸೇರದವರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ ಕೆಲವು ದಿನಗಳ ಬಳಿಕ ಈ ಘಟನೆ ನಡೆದಿದೆ.

ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿದ ಬಳಿಕ ಮಾತ್ರವೇ ಈ ಕಾರ್ಯಕ್ರಮಗಳಿಗೆ ಪ್ರವೇಶಿಸಲು ಅವಕಾಶ ನೀಡಬೇಕು. ಕೇವಲ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಕಾನ್ಪುರ ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿಶ್ವಹಿಂದೂ ಪರಿಷತ್ ನಾಯಕ ಗೌರಂಗ್ ದೀಕ್ಷಿತ್ ತಿಳಿಸಿದ್ದಾರೆ.

Leave A Reply

Your email address will not be published.