ಲಕ್ನೋ: ನಕಲಿ ಅಥವಾ ವಂಚಕರ ಕರೆಗಳ ಮೂಲಕ ಸಾವಿರಾರು ಮಂದಿ ಹಣ ಕಳೆದುಕೊಂಡ ಘಟನೆಗಳು ಸಾಕಷ್ಟಿವೆ. ಆದರೆ ಇಂಥ ವಂಚಕರ ಕರೆ ಮಹಿಳೆಯೊಬ್ಬರ ಜೀವಕ್ಕೆ ಎರವಾದ ಅಪರೂಪದ ಘಟನೆ ಆಗ್ರಾದಿಂದ ವರದಿಯಾಗಿದೆ.
ಆಗ್ರಾದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಮಾಲತಿ ವರ್ಮಾ (58) ಅವರಿಗೆ ಸೋಮವಾರ ವಾಟ್ಸಪ್ ಕರೆ ಬಂದಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಚಿತ್ರ ಕಂಡುಬಂದಿದೆ. ಕಾಲೇಜಿನಲ್ಲಿ ಓದುತ್ತಿರುವ ನಿಮ್ಮ ಮಗಳನ್ನು ಲೈಂಗಿಕ ದಂಧೆ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಕರೆ ಮಾಡಿದ ವ್ಯಕ್ತಿ ಮಾಹಿತಿ ನೀಡಿದ್ದ.
ಮಧ್ಯಾಹ್ನದ ವೇಳೆಗೆ ಈ ಕರೆ ಬಂದಿದ್ದು, ಕರೆ ಮಾಡಿ ಯಾವುದೇ ಪ್ರಕರಣ ದಾಖಲಿಸದೇ ನಿಮ್ಮ ಮಗಳು ಸುರಕ್ಷಿತವಾಗಿ ಮನೆ ಸೇರಬೇಕಿದ್ದರೆ ಒಂದು ಖಾತೆಗೆ ಒಂದು ಲಕ್ಷ ರೂಪಾಯಿ ಹಾಕುವಂತೆ ಸೂಚಿಸಿದ್ದ ಎಂದು ಮಾಲತಿ ಅವರ ಮಗ ದೀಪಾಂಶು ಹೇಳಿದ್ದಾರೆ.
ಮಗಳು ಲೈಂಗಿಕ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಕುಟುಂಬಕ್ಕೆ ಯಾವುದೇ ಆಘಾತ ಆಗಬಾರದು ಎಂಬ ಉದ್ದೇಶದಿಂದ ಈ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿಕೊಂಡಿದ್ದ.
“ನನ್ನ ತಾಯಿ ಆಗ್ರಾದ ಅಚ್ನೇರಾದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿ. ಈ ಕರೆ ಬಂದ ಬಳಿಕ ಕಳವಳಗೊಂಡು ನನಗೆ ಕರೆ ಮಾಡಿದರು. ಯಾವ ಸಂಖ್ಯೆಯಿಂದ ಕರೆ ಬಂದಿದೆ ಎಂದು ನೋಡಿದಾಗ +92 ಎಂಬ ಸಂಖ್ಯೆಯೊಂದಿಗೆ ಆರಂಭವಾಗಿತ್ತು. ಇದು ವಂಚನೆಯ ಕರೆ ಎಂದು ತಾಯಿಗೆ ಹೇಳಿದೆ. ಆದರೂ ತೀರಾ ಉದ್ವೇಗದಿಂದ ಇದ್ದ ಅವರು ಅಸ್ವಸ್ಥರಾದರು” ಎಂದು ದೀಪಾಂಶು ವಿವರಿಸಿದ್ದಾರೆ.
ತಂಗಿಯ ಜತೆಗೂ ಮಾತನಾಡಿದ್ದು, ಆಕೆ ಕಾಲೇಜಿನಲ್ಲಿ ಸುರಕ್ಷಿತವಾಗಿದ್ದಾಳೆ ಎಂದೂ ತಾಯಿಗೆ ತಿಳಿಸಿದ್ದೆ. ಆದರೆ ತಾಯಿಯ ಆರೋಗ್ಯ ಹದಗೆಡುತ್ತಾ ಹೋಗಿದ್ದು, ಶಾಲೆಯಿಂದ ಮನೆಗೆ ಬಂದಾಗ, ಸ್ವಲ್ಪ ನೋವಾಗುತ್ತಿದೆ ಎಂದು ಹೇಳಿದರು. ತಾಯಿಗೆ ಕುಡಿಯಲು ನೀರು ಕೊಟ್ಟೆವು. ಆದರೆ ಆ ಸಂದರ್ಭದಲ್ಲಿ ಅವರು ಕೊನೆಯುಸಿರೆಳೆದರು” ಎಂದು ಹೇಳಿದ್ದಾರೆ.
ಕುಟುಂಬದವರು ಗುರುವಾರ ಈ ಬಗ್ಗೆ ದೂರು ನೀಡಿದ್ದಾಗಿ ಹೆಚ್ಚುವರಿ ಪೊಲೀಸ್ ಕಮಿಷನರ್ ಮಯಾಂಕ್ ತಿವಾರಿ ಸ್ಪಷ್ಟಪಡಿಸಿದ್ದಾರೆ. ಮಾಲತಿ ವರ್ಮಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.