ಹೊಸದಿಲ್ಲಿ : ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ-ರಾಜಕಾರಣಿ ಕಂಗನಾ ರಾಣಾವತ್ ಬುಧವಾರ ಹೊಸ ವಿವಾದ ಹುಟ್ಟು ಹಾಕಿದ್ದಾರೆ.
ಈ ಹಿಂದೆ ರೈತರ ಪ್ರತಿಭಟನೆಗಳ ಕುರಿತಾದ ಹೇಳಿಕೆಗಳಿಗೆ ಟೀಕೆ ಎದುರಿಸಿದ್ದ ನಟಿ ಕಂಗನಾ, ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120 ನೇ ಜನ್ಮದಿನದಂದು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಅಗೌರವ ತೋರಿಸುವ ಪೋಸ್ಟ್ ಹಾಕಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ಸೂಚಿಸುವ ಸಂದರ್ಭದಲ್ಲಿ ‘ರಾಷ್ಟ್ರಕ್ಕೆ ಪಿತ ಅಲ್ಲ; ಕಣ್ಮಣಿಯಿದೆ. ಭಾರತ ಮಾತೆಯ ಈ ಕಣ್ಮಣಿ ಧನ್ಯರುʼ ಎಂದು ಕಂಗನಾ ರಾಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವುದು ವಿವಾದ ಹುಟ್ಟು ಹಾಕಿದೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಅವರು ಹಿಮಾಚಲಪ್ರದೇಶದ ಮಂಡಿ ಸಂಸದೆ ಕಂಗನಾ ರಾಣಾವತ್ ಅವರ “ಅಶ್ಲೀಲ ಗೇಲಿ” ಯನ್ನು ಟೀಕಿಸಿದ್ದಾರೆ. “ಬಿಜೆಪಿ ಸಂಸದೆ ಕಂಗನಾ ಅವರು ಮಹಾತ್ಮಾ ಗಾಂಧಿಯವರ ಜನ್ಮದಿನದಂದು ಈ ರೀತಿ ಅಶ್ಲೀಲ ವ್ಯಂಗ್ಯವಾಡಿದ್ದಾರೆ. ಗೋಡ್ಸೆ ಆರಾಧಕರು ಬಾಪು ಮತ್ತು ಶಾಸ್ತ್ರಿ ಅವರ ನಡುವೆ ವ್ಯತ್ಯಾಸವನ್ನು ಹೇಳುತ್ತಾರೆ. ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಹೊಸ ಗೋಡ್ಸೆ ಭಕ್ತರನ್ನು ಮನಃಪೂರ್ವಕವಾಗಿ ಕ್ಷಮಿಸುವರೇ? ರಾಷ್ಟ್ರಪಿತ ಇದ್ದಾರೆ, ರಾಷ್ಟ್ರಪುತ್ರರೂ ಇದ್ದಾರೆ ಮತ್ತು ಹುತಾತ್ಮರೂ ಇದ್ದಾರೆ. ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರು, ”ಎಂದು ಸುಪ್ರಿಯಾ ಶ್ರಿನೇತ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಂಜಾಬ್‌ನ ಹಿರಿಯ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಕೂಡ ರಾಣಾವತ್ ಅವರ ಹೇಳಿಕೆಗಳನ್ನು ಟೀಕಿಸಿದ್ದಾರೆ.”ಗಾಂಧೀಜಿಯವರ 155ನೇ ಜನ್ಮದಿನದಂದು ಕಂಗನಾ ರಾಣಾವತ್ ನೀಡಿದ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ. ತನ್ನ ಸಣ್ಣ ರಾಜಕೀಯ ಜೀವನದಲ್ಲಿ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ” ಎಂದು ಕಾಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
“ರಾಜಕೀಯವು ಅವರ ಕ್ಷೇತ್ರವಲ್ಲ. ರಾಜಕೀಯವು ಗಂಭೀರ ವಿಷಯವಾಗಿದೆ. ಮಾತನಾಡುವ ಮೊದಲು ಒಬ್ಬರು ಯೋಚಿಸಬೇಕು. ಅವರ ವಿವಾದಾತ್ಮಕ ಹೇಳಿಕೆಗಳು ಪಕ್ಷಕ್ಕೆ ಮುಜುಗರವುಂಟು ಮಾಡುತ್ತಿದೆ,” ಎಂದು ಅವರು ಹೇಳಿದ್ದಾರೆ.