ಹೊಸದಿಲ್ಲಿ/ತಿರುಪತಿ: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆಯಾಗಿದೆ ಎಂಬುದರ ಕುರಿತು ತನಿಖೆಯಾಗಬೇಕು ಎಂಬ ಕೂಗು ತೀವ್ರವಾಗುತ್ತಿರುವಂತೆಯೆ, ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಗೆ ತುಪ್ಪ ಸರಬರಾಜು ಮಾಡಿರುವ ತಮಿಳುನಾಡು ಮೂಲದ ಸಂಸ್ಥೆಗೆ ದೇಶದ ಆಹಾರ ಸುರಕ್ಷತಾ ನಿಯಂತ್ರಣ ಪ್ರಾಧಿಕಾರವಾದ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು (FSSAI) ನೋಟಿಸ್ ಜಾರಿಗೊಳಿಸಿದೆ.
ತಿರುಪತಿ ಲಡ್ಡುವಿನಲ್ಲಿ ಕಲಬೆರಕೆಯಾಗಿದೆ ಎಂಬ ವಿವಾದದಲ್ಲಿ ಮಧ್ಯಪ್ರವೇಶಿಸಿರುವ FSSAI, ನಿಮ್ಮ ಕೇಂದ್ರೀಯ ಪರವಾನಗಿಯನ್ನು ಯಾಕೆ ಅಮಾನತುಗೊಳಿಸಬಾರದು ಎಂದು ಎ.ಆರ್.ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಗೆ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡುತ್ತಿದ್ದ ಸಂಸ್ಥೆಗಳ ಪೈಕಿ ಎ.ಆರ್.ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಕೂಡಾ ಒಂದು ಎಂದು ಆಂಧ್ರಪ್ರದೇಶದ ಮಂಗಳಗಿರಿಯ ಇನ್ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್ಸ್ ನ ನಿರ್ದೇಶಕರು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರಕ್ಕೆ ಮಾಹಿತಿ ಒದಗಿಸಿದ್ದಾರೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನಂನ ತುಪ್ಪ ಖರೀದಿ ಸಮಿತಿಯು ತಿರುಮಲ ತಿರುಪತಿ ದೇವಸ್ಥಾನಂಗೆ ಸರಬರಾಜು ಮಾಡಿರುವ ಎಲ್ಲ ತುಪ್ಪಗಳ ಮಾದರಿಯನ್ನು ಗುಜರಾತ್ ನ ಆನಂದ್ ನಲ್ಲಿರುವ ಎನ್ಡಿಡಿಬಿ ಕಾಫ್ ಲ್ಯಾಬ್ ಗೆ ಕಳಿಸಿಕೊಟ್ಟಿತ್ತು ಎಂದೂ ಮಾಹಿತಿ ದೊರೆತಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
“ಮಾದರಿಗಳ ಪರೀಕ್ಷೆಯ ಪ್ರಕಾರ, ನಿಮ್ಮ ಎ.ಆರ್.ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ (ಎಫ್ಎಸ್ಎಸ್ಎಐ ಕೇಂದ್ರೀಯ ಪರವಾನಗಿ ಸಂಖ್ಯೆ 10014042001610) ಮಾದರಿಯು ಶುದ್ಧತೆಯ ಮಾನದಂಡವನ್ನು ತಲುಪುವಲ್ಲಿ ವಿಫಲಗೊಂಡಿದ್ದು, ತಿರುಮಲ ತಿರುಪತಿ ದೇವಸ್ಥಾನಂನ ಕಾರ್ಯನಿರ್ವಹಣಾಧಿಕಾರಿಯು ನಿಮ್ಮ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ” ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.
ನಮ್ಮ ನೋಟಿಸ್ ಗೆ ಸೆಪ್ಟೆಂಬರ್ 23ರೊಳಗೆ ಉತ್ತರಿಸಬೇಕು ಇಲ್ಲವೆ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ಹಾಗೂ ನಿಯಮಗಳ ಪ್ರಕಾರ, ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ನಡುವೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತುಪ್ಪ ಕಲಬೆರೆಕೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿ ಆದೇಶಿಸಿದ್ದಾರೆ.