EBM News Kannada
Leading News Portal in Kannada

ಉತ್ತರಪ್ರದೇಶ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ನಾಲ್ವರು ಮೃತ್ಯು

0


PC: PTI

ಉತ್ತರಪ್ರದೇಶ: ಫಿರೋಝಾಬಾದ್ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 3 ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಮೀರಾದೇವಿ (45), ಅಮನ್ (20), ಗೌತಮ್ ಕುಶ್ವಾಹ (18) ಮತ್ತು ಕುಮಾರಿ ಇಚ್ಚಾ (3) ಎಂದು ಗುರುತಿಸಲಾಗಿದೆ.

ಶಿಕೋಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ನೌಶೇರಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಘಟನೆ ನಡೆದಿದ್ದು, ನಾಲ್ವರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಪರಿಶೀಲನೆ ಬಳಿಕ ಮಾತನಾಡಿದ ಆಗ್ರಾ ಐಜಿ ದೀಪಕ್ ಕುಮಾರ್, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈವೆರೆಗೆ 10 ಜನರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಆರು ಮಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ವೇಳೆ ಕಟ್ಟಡ ಕುಸಿದ ಪರಿಣಾಮ ಇನ್ನೂ ಕೆಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜನನಿಬಿಡ ಪ್ರದೇಶದಲ್ಲಿ ಈ ಗೋದಾಮು ಕಾರ್ಯ ನಿರ್ವಹಿಸಲು ಹೇಗೆ ಅನುಮತಿ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸ್ಥಳೀಯ ನಿವಾಸಿಗಳ ಪ್ರಕಾರ, ರಾತ್ರಿ 10.30ರ ಸುಮಾರಿಗೆ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಕಟ್ಟಡದ ಗೋಡೆಗಳು ಕುಸಿದು ಅದರಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ 7 ಜನರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ.

Leave A Reply

Your email address will not be published.