ಹೊಸದಿಲ್ಲಿ: ಗಾಲ್ವಾನ್ ಕಣಿವೆ ಸೇರಿದಂತೆ ಪೂರ್ವ ಲಡಾಖ್‌ನ 4 ಸ್ಥಳಗಳಿಂದ ಸೈನಿಕರನ್ನು ವಾಪಾಸ್ಸು ಕರೆಸಿಕೊಳ್ಳಲಾಗಿದೆ ಎಂದು ಚೀನಾ ಹೇಳಿಕೊಂಡಿದೆ.
ಗಾಲ್ವಾನ್ ಕಣಿವೆ ಸೇರಿದಂತೆ ಪೂರ್ವ ಲಡಾಖ್‌ನ 4 ಸ್ಥಳಗಳಿಂದ ಸೈನಿಕರನ್ನು ವಾಪಾಸ್ಸು ಕರೆಸಿಕೊಳ್ಳಲಾಗಿದೆ. ಉಭಯ ದೇಶಗಳ ನಡುವೆ ಗಡಿ ಪರಿಸ್ಥಿತಿ ಸ್ಥಿರವಾಗಿದ್ದು, ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಚೀನಾ ಹೇಳಿಕೊಂಡಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಮಾತನಾಡುತ್ತಾ, ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುವ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಲು ರಷ್ಯಾದಲ್ಲಿ ನಡೆದ ತಮ್ಮ ಸಭೆಯಲ್ಲಿ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಸೆ.12ರಂದು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಗಡಿ ಸಮಸ್ಯೆ, ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ ನಿಟ್ಟಿನಲ್ಲಿ ಮಾತುಕತೆ ನಡೆದಿದೆ.
ಪೂರ್ವ ಲಡಾಖ್‌ನಲ್ಲಿನ ಮಿಲಿಟರಿ ಬಿಕ್ಕಟ್ಟಿನಿಂದಾಗಿ ನಾಲ್ಕು ವರ್ಷಗಳಿಂದ ಹಳಸಿರುವ ದ್ವಿಪಕ್ಷೀಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಭಾರತ ಮತ್ತು ಚೀನಾ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಚೀನಾ ಮತ್ತು ಭಾರತ ಗಾಲ್ವಾನ್ ಕಣಿವೆ ಸೇರಿದಂತೆ ಗಡಿಯ ಪಶ್ಚಿಮ ವಲಯದ ನಾಲ್ಕು ಸ್ಥಳಗಳಿಂದ ಸೈನಿಕರನ್ನು ವಾಪಾಸ್ಸು ಕರೆಸಿಕೊಂಡಿದೆ ಎಂದು ವಾಂಗ್ ಯಿ ಹೇಳಿದ್ದಾರೆ.
ಚೀನಾದ ಜೊತೆಗಿನ ಶೇ 75ರಷ್ಟು ಸಮಸ್ಯೆಗಳು ಇತ್ಯರ್ಥವಾಗಿವೆ. ಆದರೆ ಗಡಿಯಲ್ಲಿ ಹೆಚ್ಚು ಸೈನಿಕರನ್ನು ನಿಯೋಜಿಸುತ್ತಿರುವುದೇ ದೊಡ್ಡ ಸಮಸ್ಯೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದದ್ದರು. ಇದರ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ.