ಗುವಾಹತಿ: ಮೂರನೇ ವರ್ಷದ ಬಿಟೆಕ್ ವಿದ್ಯಾರ್ಥಿಯ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಡೆಸಿದ ಮಿಂಚಿನ ಪ್ರತಿಭಟನೆಗೆ ಮಣಿದು ಗುವಾಹತಿ ಐಐಟಿಯ ಶೈಕ್ಷಣಿಕ ವಿಭಾಗದ ಡೀನ್ ಪದತ್ಯಾಗ ಮಾಡಿದ್ದಾರೆ. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.
ಇತರ ಹಲವು ಮಂದಿ ಭೋದಕ ಸಿಬ್ಬಂದಿಯ ರಾಜೀನಾಮೆಗೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು, ಹಾಸ್ಟೆಲ್ ವ್ಯವಹಾರಗಳ ಮಂಡಳಿಯ ಉಪಾಧ್ಯಕ್ಷ ಹಾಗೂ ವಿದ್ಯಾರ್ಥಿ ಮತ್ತು ಶೈಕ್ಷಣಿಕ ವ್ಯವಹಾರಗಳ ಸಹ-ಡೀನ್ ಗಳ ಪದತ್ಯಾಗದ ಬೇಡಿಕೆ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ನಿರ್ದೇಶಕ ದೇವೇಂದ್ರ ಜಲಿಹಾಲ್ ಭರವಸೆ ನೀಡಿದ್ದಾರೆ.
ಶೈಕ್ಷಣಿಕ ವ್ಯವಹಾರಗಳ ಡೀನ್ ಕೆ.ವಿ.ಕೃಷ್ಣ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಬೇಕೇ ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಐಐಟಿ ಮೂಲಗಳು ಹೇಳಿವೆ. ಸಂಸ್ಥೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಉತ್ತರ ಪ್ರದೇಶದ ಬಲಿಯಾದಿಂದ ಆಗಮಿಸಿದ್ದ ಪಾಸ್ವಾನ್ ಸಮುದಾಯದ ವಿದ್ಯಾರ್ಥಿ ಬಿಮಲೇಶ್ ಕುಮಾರ್ ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು.
“ಗುವಾಹತಿ ಐಐಟಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನ ಇದು. ಕಡಿಮೆ ಹಾಜರಾತಿಗೆ ವೈದ್ಯಕೀಯ ಕಾರಣಗಳನ್ನು ಸಲ್ಲಿಸಿದರೂ ವಿದ್ಯಾರ್ಥಿಯನ್ನು ಮೂರನೇ ವರ್ಷ ಅನುತ್ತೀರ್ಣಗೊಳಿಸುವಂಥ ನಿರ್ದಯ ಕ್ರಮವನ್ನು ಏಕೆ ಕೈಗೊಳ್ಳಬೇಕಿತ್ತು? ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಿದ್ದು ಕಳಪೆ ಶೈಕ್ಷಣಿಕ ಸಾಧನೆಯ ಕಾರಣಕ್ಕಲ್ಲ. ಬದಲಾಗಿ ಕಡಿಮೆ ಹಾಜರಾತಿಯ ಕಾರಣಕ್ಕೆ” ಎಂದು ಮೃತ ವಿದ್ಯಾರ್ಥಿಯ ತಂದೆ ಹಾಗೂ ಸಿಐಎಸ್ಎಫ್ ಹವೀಲ್ದಾರ್ ರಾಸ್ ಬಿಹಾರಿ ರಾಮ್ ಪಾಸ್ವಾನ್ ಹೇಳಿದ್ದಾರೆ.
“ಸಂಸ್ಥೆಯಿಂದ ನನ್ನನ್ನು ಹೊರಹಾಕಲಾಗುತ್ತದೆ ಎಂದು ಆತ ಹೇಳಿದ್ದ. ಇತರ ಎಲ್ಲ ವಿದ್ಯಾರ್ಥಿಗಳಂತೆ ಆತ ಕೂಡಾ ಒಳ್ಳೆಯ ಸಾಧನೆ ಮಾಡಬೇಕು ಎಂಬ ಒತ್ತಡದಲ್ಲಿದ್ದ. ಆದರೆ ಆತ ಪ್ರತಿಭಾವಂತನಾಗಿದ್ದರಿಂದ ನಾವೆಂದೂ ಆತನ ಮೇಲೆ ಒತ್ತಡ ಹಾಕಿಲ್ಲ” ಎಂದು ಅವರು ವಿವರಿಸಿದರು.
ಕಡ್ಡಾಯ ಶೇಕಡ 75ರ ಹಾಜರಾತಿ ಸೇರಿದಂತೆ ಶೈಕ್ಷಣಿಕ ನೀತಿಗಳಲ್ಲಿ ಸ್ಥಿತಿಸ್ಥಾಪಕತ್ವ ತರುವ ಭರವಸೆಯನ್ನು ನಿರ್ದೇಶಕರು ನೀಡಿದ್ದಾರೆ.