EBM News Kannada
Leading News Portal in Kannada

ಇವಿಎಂ ಕುರಿತ ವಿಡಿಯೊ: ಇಬ್ಬರು ಯೂಟ್ಯೂಬರ್‌ ಗಳಿಗೆ ನೋಟಿಸ್ ಜಾರಿಗೊಳಿಸಿದ ಯೂಟ್ಯೂಬ್; ಮಾನಿಟೈಸೇಷನ್ ಗೂ ನಿರ್ಬಂಧ

0


ಹೊಸದಿಲ್ಲಿ: ತಿಂಗಳುಗಳ ಹಿಂದೆ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ದಕ್ಷತೆ ಕುರಿತು ಮಾಡಲಾಗಿರುವ ವಿಡಿಯೊಗಳ ಕೆಳಗೆ ಹೆಚ್ಚುವರಿ ವಿವರಣೆಯನ್ನು ಸೇರ್ಪಡೆ ಮಾಡಲು ಪ್ರಾರಂಭಿಸಿದ್ದ ಯೂಟ್ಯೂಬ್, ಅಂತಹ ವಿಡಿಯೊಗಳ ಮಾನಿಟೈಸೇಷನ್ ಗೂ ನಿರ್ಬಂಧ ವಿಧಿಸಲು ಪ್ರಾರಂಭಿಸಿದೆ. ಅದರರ್ಥ, ಅಂತಹ ವಿಡಿಯೊಗಳು ಜಾಹೀರಾತು ಆದಾಯಕ್ಕೆ ಮಾನ್ಯತೆ ಹೊಂದಿರುವುದಿಲ್ಲ.

ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳಿಗೆ ಸಂಬಂಧಿಸಿದ ವಿಡಿಯೊಗಳಿಗೆ ವಿಧಿಸಲಾಗಿರುವ ಮಾನ್ಯತೆಯ ಮಿತಿಯ ಕುರಿತು ಮೇಘ್ ನಾದ್ ಹಾಗೂ ಸ್ವತಂತ್ರ ಪತ್ರಕರ್ತ ಸೋಹಿತ್ ಮಿಶ್ರಾ ಸೇರಿದಂತೆ ಕನಿಷ್ಠ ಪಕ್ಷ ಇಬ್ಬರು ಕ್ರಿಯೇಟರ್ ಗಳಿಗೆ ಇತ್ತೀಚೆಗೆ ಯೂಟ್ಯೂಬ್ ಎಚ್ಚರಿಕೆ ರವಾನಿಸಿದೆ. ತನ್ನ ಈ ನಿರ್ಧಾರಕ್ಕೆ ಜಾಹೀರಾತುದಾರ ಸ್ನೇಹಿ ಮಾರ್ಗಸೂಚಿಯನ್ನು ಉಲ್ಲೇಖಿಸಿರುವುದು ಕಾರಣ ಎಂದು ಹೇಳಿರುವ ಈ ಆನ್ ಲೈನ್ ವೇದಿಕೆಯು, ತಪ್ಪು ಮಾಹಿತಿಯನ್ನು ಒಳಗೊಂಡಿರುವ ವಿಡಿಯೊಗಳು ಜಾಹೀರಾತು ಆದಾಯವನ್ನು ಪಡೆಯಲು ಅರ್ಹವಾಗಿರುವುದಿಲ್ಲ ಎಂದು ಹೇಳಿದೆ.

ಮಿಶ್ರಾರ ಸೋಹಿತ್ ಮಿಶ್ರಾ ಅಫಿಷಿಯಲ್ ಯೂಟ್ಯೂಬ್ ವಾಹಿನಿಯು 3.68 ಲಕ್ಷ ಚಂದಾದಾರರನ್ನು ಹೊಂದಿದ್ದರೆ, ಮೇಘ್ ನಾದ್ ರ ವಾಹಿನಿಯು ಸುಮಾರು 42,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಈ ಕುರಿತು The Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಮಿಶ್ರಾ, ಇವಿಎಂಗೆ ಸಂಬಂಧಿಸಿದ ನನ್ನ ವಿಡಿಯೊಗಳನ್ನು ‌ʼಲಿಮಿಟೆಡ್ ಮಾನಿಟೈಸೇಷನ್ʼ ಅಡಿ ಇರಿಸಲಾಗಿದೆ. ಇವುಗಳ ಪೈಕಿ ಒಂದೇ ಒಂದು ವಿಡಿಯೊದ ʼಮಾನಿಟೈಸೇಷನ್ʼ ಅನ್ನು ನನ್ನ ಮರುಪರಿಶೀಲನಾ ಮನವಿಯ ಮೇರೆಗೆ ಮರು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೇಘ್ ನಾದ್ ರ ನಾಲ್ಕು ನೇರ ಪ್ರಸಾರದಿಂದ ಸಂಗ್ರಹವಾಗಿದ್ದ ಜಾಹೀರಾತು ಆದಾಯದ ಮೇಲೆಯೂ ಯೂಟ್ಯೂಬ್ ನಿರ್ಬಂಧ ವಿಧಿಸಿದೆ. ಎರಡರಿಂದ ಮೂರು ಗಂಟೆಗಳ ಕಾಲ ಸುದೀರ್ಘವಾಗಿದ್ದ ಈ ವಿಡಿಯೊಗಳಲ್ಲಿ ಇವಿಎಂ ಕುರಿತ ಪ್ರಶ್ನೆಗಳು, ಶೇ. 100 ವಿವಿಪ್ಯಾಟ್ ಎಣಿಕೆ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಯ ಕುರಿತು ಮಾಹಿತಿ ಹಾಗೂ ಚುನಾವಣಾ ಬಾಂಡ್ ಕುರಿತಂತೆ ಮಾತುಕತೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮೇಘ್ ನಾದ್ ಉತ್ತರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮೇಘ್ ನಾದ್, “ನಾನು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು, ನನಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಇದು ಏಕಾಗಿದೆ ಎಂಬ ಕುರಿತು ನನ್ನ ಬಳಿ ಯಾವುದೇ ಸ್ಪಷ್ಟತೆ ಇಲ್ಲ” ಎಂದು ಹೇಳಿದ್ದಾರೆ.

ಆದರೆ, ಯೂಟ್ಯೂಬ್ ಪ್ರಕಾರ, ಜಾಹೀರಾತುದಾರರ ಮಾರ್ಗಸೂಚಿಯನ್ನು ಉಲ್ಲಂಘಿಸಿರುವ ನೆಲೆಯಲ್ಲಿ ಮಿಶ್ರಾ ಹಾಗೂ ಮೇಘ್ ನಾದ್ ರ ವಿಡಿಯೊಗಳ ಜಾಹೀರಾತುಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಈ ಉಲ್ಲಂಘನೆಗಳಲ್ಲಿ ಸಾರ್ವಜನಿಕ ಮತದಾನ ನಿಯಮಗಳ ಕುರಿತು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವುದು, ರಾಜಕೀಯ ಅಭ್ಯರ್ಥಿಗಳ ಅರ್ಹತೆ ಕುರಿತು ಅವರ ವಯಸ್ಸು ಅಥವಾ ಹುಟ್ಟಿನ ಸ್ಥಳದ ಆಧಾರದಲ್ಲಿ ನಿರ್ಧರಿಸುವುದು, ಚುನಾವಣಾ ಫಲಿತಾಂಶಗಳು ಹಾಗೂ ಸರಕಾರದ ಅಧಿಕೃತ ದಾಖಲೆಗಳಿಗೆ ವ್ಯತಿರಿಕ್ತವಾಗಿ ಜನಗಣತಿ ಪಾಲ್ಗೊಳ್ಳುವಿಕೆಯ ಕುರಿತು ವಿವರ ನೀಡುವುದು ಸೇರಿವೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.