ನಮ್ಮ ಶಿಸ್ತು ಮತ್ತು ಮಾತುಕತೆಗೆ ಆದ್ಯತೆಯನ್ನು ದೌರ್ಬಲ್ಯಗಳೆಂದು ಭಾವಿಸಬೇಡಿ: ಸರಕಾರಕ್ಕೆ ಆರೆಸ್ಸೆಸ್ ರೈತ ಸಂಘಟನೆಯ ಎಚ್ಚರಿಕೆ
ಹೊಸದಿಲ್ಲಿ: ಕನಿಷ್ಠ ಬೆಂಬಲ ಬೆಲೆಗೆ ಕಾನೂನುಬದ್ಧ ಖಾತರಿಗಾಗಿ ಆಗ್ರಹಿಸಿ ಕೆಲವು ರೈತ ಸಂಘಟನೆಗಳ ಹಿಂಸಾತ್ಮಕ ಪ್ರತಿಭಟನೆಗಳನ್ನು ಸಂಘಪರಿವಾರಕ್ಕೆ ಸೇರಿದ ಭಾರತೀಯ ಕಿಸಾನ್ ಸಂಘ (ಬಿಕೆಎಸ್)ವು ಖಂಡಿಸಿದೆ. ಇದೇ ವೇಳೆ ರೈತರ ಮನವಿಗಳಿಗೆ ಕಿವಿಗೊಡದ್ದಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಅದು ಚಾಟಿಯನ್ನೂ ಬೀಸಿದೆ. ತನ್ನ ರಾಷ್ಟ್ರವಾದ, ಶಿಸ್ತು ಮತ್ತು ಮಾತುಕತೆಗೆ ಆದ್ಯತೆಯನ್ನು ದೌರ್ಬಲ್ಯದ ಸಂಕೇತಗಳೆಂದು ತಪ್ಪಾಗಿ ಗ್ರಹಿಸಬಾರದು ಎಂದು ಅದು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ ಎಂದು thehindu.com ವರದಿ ಮಾಡಿದೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಕೆಎಸ್ ಪ್ರಧಾನ ಕಾರ್ಯದರ್ಶಿ ಮೋಹಿನಿ ಮೋಹನ ಮಿಶ್ರಾ ಅವರು, “ದೇಶದ ರೈತ ಸಂಘಟನೆಗಳು ಶಿಸ್ತುಬದ್ಧವಾಗಿ ಮತ್ತು ಶಾಂತಿಯುತವಾಗಿ ದಿಲ್ಲಿಗೆ ಬಂದು ಸೂಕ್ತ ವೇದಿಕೆಗಳಲ್ಲಿ ರೈತರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಮಂಡಿಸಿದಾಗ ಅವರೊಂದಿಗೆ ಮಾತುಕತೆ ನಡೆಸುವುದು ಸೂಕ್ತವೆಂದು ಸರಕಾರವು ಪರಿಗಣಿಸುವುದಿಲ್ಲ. ಸರಕಾರದ ಧೋರಣೆಯು ವಿಷಾದನೀಯವಾಗಿದೆ, ಇದು ಹಿಂಸಾತ್ಮಕ ಪ್ರತಿಭಟನೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ರೈತ ಸಮುದಾಯದ ಮತ್ತು ಅವರ ಬೇಡಿಕೆಗಳ ‘ರಾಜಕೀಯೀಕರಣ’ವು ಅವರ ಸಂಕಷ್ಟಗಳನ್ನು ಹೆಚ್ಚಿಸುತ್ತದೆ” ಎಂದರು.
ಪಂಜಾಬ್ ಮತ್ತು ಹರ್ಯಾಣ ಗಡಿಗಳಲ್ಲಿ ಸಾವಿರಾರು ರೈತರು ನಡೆಸುತ್ತಿರುವ ದಿಲ್ಲಿ ಚಲೋ ಆಂದೋಲನದ ಹಿನ್ನೆಲೆಯಲ್ಲಿ ಬಿಕೆಎಸ್ನ ಹೇಳಿಕೆ ಹೊರಬಿದ್ದಿದೆ.
ಎರಡು ದಿನಗಳ ಹಿಂದೆ ಅಜ್ಮೀರ್ ನಲ್ಲಿ ನಡೆದ ಬಿಕೆಎಸ್ ಪದಾಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳ ಕುರಿತು ಮಾತನಾಡಿದ ಮಿಶ್ರಾ, ರೈತರು ತಮ್ಮ ಕೃಷಿ ವೆಚ್ಚದ ಆಧಾರದಲ್ಲಿ ತಮ್ಮ ಬೆಳೆಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯಬೇಕು ಮತ್ತು ಕೃಷಿ ವೆಚ್ಚಗಳ ಮೇಲಿನ ಜಿಎಸ್ಟಿಯನ್ನು ರದ್ದುಗೊಳಿಸಬೇಕು ಎಂದು ಹೇಳಿದರು.
ಸರಕಾರವು ನೀಡುತ್ತಿರುವ ಕಿಸಾನ್ ಸಮ್ಮಾನ ನಿಧಿಯಲ್ಲಿ ಗಣನೀಯ ಹೆಚ್ಚಳವಾಗಬೇಕು ಮತ್ತು ವಂಶವಾಹಿ ಪರಿವರ್ತಿತ ಬೀಜಗಳಿಗೆ ಮಾರುಕಟ್ಟೆಯಲ್ಲಿ ಅವಕಾಶ ನೀಡಬಾರದು ಎಂದು ಆಗ್ರಹಿಸಿದ ಅವರು, ಬೀಜಗಳು ರೈತರ ಹಕ್ಕು ಆಗಿವೆ ಮತ್ತು ಮಾರುಕಟ್ಟೆಗಳಲ್ಲಿ ರೈತರ ಶೋಷಣೆಯನ್ನು ತಡೆಯಲು ಸರಕಾರಗಳು ವ್ಯವಸ್ಥೆಗಳನ್ನು ಮಾಡಬೇಕು ಎಂದರು. ಬಿಕೆಎಸ್ ನಿರ್ಣಯಗಳು ಧಾನ್ಯಗಳ ಮಾರಾಟಕ್ಕೆ ಸಮಗ್ರ ನೀತಿಗೆ ಕರೆ ನೀಡಿವೆ ಎಂದೂ ಅವರು ತಿಳಿಸಿದರು.
ಎಂಎಸ್ಪಿ ಖಾತರಿಗೆ ರೈತರ ಬೇಡಿಕೆಗಳ ಕುರಿತು ಬಿಕೆಎಸ್ ಹೇಳಿಕೆಗಳು ಅದರ ಮಾತೃಸಂಸ್ಥೆ ಆರೆಸ್ಸೆಸ್ ನ ಮುಖವಾಣಿ ‘ಆರ್ಗನೈಸರ್’ನ ಸಂಪಾದಕೀಯ ಲೇಖನಕ್ಕೆ ವಿರುದ್ಧವಾಗಿವೆ. ಎಲ್ಲ ಬೆಲೆಗಳಿಗೆ ಎಂಎಸ್ಪಿಗಳಿಗೆ ಕಾನೂನುಬದ್ಧ ಖಾತರಿಗಳು, ಸಾಲ ಮನ್ನಾ ಮತ್ತು ಎಲ್ಲ ರೈತರಿಗೆ ಪಿಂಚಣಿಗಳಂತಹ ‘ಅಸಮಂಜಸ ’ಬೇಡಿಕೆಗಳೊಂದಿಗೆ ರೈತರಿಂದ ಬೃಹತ್ ಸಮಾವೇಶ ಮತ್ತು ರಸ್ತೆ ತಡೆಗಳನ್ನು ಮಾಡಿಸಲಾಗುತ್ತಿದೆ ಎಂದು ಸಂಪಾದಕೀಯವು ಪ್ರತಿಪಾದಿಸಿತ್ತು.