ಹೊಸದಿಲ್ಲಿ : ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ ಮಂಗಳವಾರ ಹೊಸ ಸಂಸತ್ ಭವನದಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಸೂದೆ ಮಂಡಿಸಿದರು.
ಲೋಕಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.
ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು.
ಮಹಿಳಾ ಮೀಸಲಾತಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಇದು ಮಹಿಳಾ ನೇತೃತ್ವದ ಅಭಿವೃದ್ಧಿಯ ಕಡೆಗೆ ತೆಗೆದುಕೊಂಡ ಸಕಾರಾತ್ಮಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
“ಈ ಹಿಂದೆಯೂ ಸಂಸತ್ತು ಈ ಮಸೂದೆಯನ್ನು ಅಂಗೀಕರಿಸಲು ಪ್ರಯತ್ನಿಸಿದೆ. ಆದರೆ, ಹಿಂದಿನ ಸರ್ಕಾರಗಳು ಈ ಮಸೂದೆಯನ್ನು ತರಲು ವಿಫಲವಾಗಿತ್ತು” ಎಂದು ಹಿಂದಿನ ಸರ್ಕಾರ ವಿರುದ್ಧ ಪ್ರಧಾನಿ ಕಿಡಿ ಕಾರಿದ್ದಾರೆ.
ವರ್ಷಗಳ ಕಾಲ ಮಹಿಳಾ ಮೀಸಲಾತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ನಾವು ಇತಿಹಾಸವನ್ನು ಸೃಷ್ಟಿಸಿದ್ದೇವೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಪ್ರಧಾನಿ ಹೇಳಿದ್ದಾರೆ.