EBM News Kannada
Leading News Portal in Kannada

ದಿಲ್ಲಿ: ಸಂಘಪರಿವಾರದಿಂದ ಚರ್ಚ್‌ನಲ್ಲಿ ದಾಂಧಲೆ; ವರದಿ

0



ಹೊಸದಿಲ್ಲಿ: ಸುಮಾರು 20 ಜನರಿದ್ದ ಸಂಘಪರಿವಾರದ ಗುಂಪೊಂದು ‘‘ಜೈ ಶ್ರೀರಾಮ್’’ ಹಾಗೂ ‘‘ಈ ಹಿಂದೂ ರಾಷ್ಟ್ರ ನಮ್ಮದು’’ ಎಂದು ಘೋಷಣೆಗಳನ್ನು ಕೂಗುತ್ತಾ ಚರ್ಚ್‌ನಲ್ಲಿ ದಾಂಧಲೆ ನಡೆಸಿದ ಹಾಗೂ ಕ್ರೈಸ್ತ ಸಮುದಾಯದ ಜನರಿಗೆ ಹಲ್ಲೆ ನಡೆಸಿದ ಘಟನೆ ದಿಲ್ಲಿಯ ತಾಹಿರ್‌ಪುರದಲ್ಲಿ ರವಿವಾರ ನಡೆದಿದೆ ಎಂದು ವರದಿಯಾಗಿದೆ.

ಚರ್ಚ್‌ನಲ್ಲಿ ರವಿವಾರ ಬೆಳಗ್ಗೆ 10.40ಕ್ಕೆ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭ ಸಂಘ ಪರಿವಾರದ ಗುಂಪು ದಾಳಿ ನಡೆಸಿತು ಎಂದು ಪಾಸ್ಟರ್ ಸತ್ಪಾಲ್ ಭಾಟಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ಸಂಘ ಪರಿವಾರದ ಗುಂಪು ಘೋಷಣೆಗಳನ್ನು ಕೂಗುತ್ತಾ ಚರ್ಚ್ ಪ್ರವೇಶಿಸಿತು. ಪ್ರಾರ್ಥನೆಗೆ ಸೇರಿದ್ದ ಮಹಿಳೆಯರು ಸೇರಿದಂತೆ ಕ್ರೈಸ್ತ ಸಮುದಾಯದ ಜನರಿಗೆ ದೊಣ್ಣೆಯಿಂದ ಥಳಿಸಿತು. ಯೇಸುವಿನ ಫೋಟೊವನ್ನು ಧ್ವಂಸಗೊಳಿಸಿತು. ಬೈಬಲ್ ಹರಿಯಲು ಪ್ರಯತ್ನಿಸಿತು. ಕೆಲವರನ್ನು ಚರ್ಚ್‌ನಿಂದ ಹೊರಗೆ ಎಳೆದುಕೊಂಡು ಬಂದು ಥಳಿಸಿತು ಎಂದು ಭಾಟಿ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ.

‘ಡೆಮಾಕ್ರೆಸಿ ನ್ಯೂಸ್ ಇಂಡಿಯಾ’ ಶೇರ್ ಮಾಡಿದ ವೀಡಿಯೊದಲ್ಲಿ ಚರ್ಚ್‌ನ ಒಳಗೆ ಸಂಗೀತೋಪಕರಣಗಳನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ.

‘‘ನನಗೆ ತನಿಖೆ ನಡೆಯುವ ಭರವಸೆ ಇದೆ. ಇಲ್ಲದಿದ್ದರೆ, ಯಾರು ಕೂಡ ಬಂದು ನಮಗೆ ಥಳಿಸುವ ಸಾಧ್ಯತೆ ಇದೆ’’ ಎಂದು ಭಾಟಿ ಹೇಳಿದ್ದಾರೆ. ಬಜರಂಗದಳ ಹಾಗೂ ಆರೆಸ್ಸೆಸ್ ಈ ದಾಂಧಲೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಭಾತಿ ಹಾಗೂ ಇತರ ಕೆಲವರು ದೂರು ದಾಖಲಿಸಲು ಜಿಟಿಬಿ ಎಂಕ್ಲೇವ್ ಪೊಲೀಸ್ ಠಾಣೆಗೆ ತೆರಳಿದ್ದರು. ಈ ಸಂದರ್ಭ ಬಜರಂಗ ದಳ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್‌ಗೆ ಸೇರಿದ ಸುಮಾರು 100 ಮಂದಿ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದರು. ಅಲ್ಲದೆ, ‘‘ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದರು’’ ಎಂದು ದಿನಪತ್ರಿಕೆಯೊಂದು ವರದಿ ಮಾಡಿದೆ.

Leave A Reply

Your email address will not be published.