ಕರಾವಳಿ, ಮಲೆನಾಡಿನಲ್ಲಿ ಮಳೆಯ ಆರ್ಭಟ: ರಸ್ತೆ ಸಂಚಾರ ಅಸ್ತವ್ಯಸ್ಥ
ಮಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುರುವಾರ ಭಾರೀ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಮೊಬೈಲ್ ಸಂಪರ್ಕ ಸಹ ಕಡಿತವಾಗಿದೆ.
ತುಂಗಾ ನದಿಯಲ್ಲಿ ಪ್ರವಾಹವುಂಟಾದ ಕಾರಣ ದಕ್ಷಿಣ ಕನ್ನಡದ ಕಡೆ ಸಾಗುತ್ತಿದ್ದ ಐವತ್ತಕ್ಕೂ ಹೆಚ್ಚು ವಾಹನಗಳು ಶೃಂಗೇರಿಯ ಸಮೀಪದ ನೆಮ್ಮಾರಿನಲ್ಲಿ ನೆರೆ ನೀರಿನಲ್ಲಿ ಸಿಲುಕಿದೆ. ಬುಧವಾರ ರಾತ್ರಿ ದಾವಣಗೆರೆಯಿಂದ ಮಂಗಳೂರಿನತ್ತ ಹೊರಟಿದ್ದ ದುರ್ಗಾಂಬಾ ಬಸ್ ಸಹ ಪ್ರವಾಹದ ಕಾರಣ ಮುಂದೆ ಚಲಿಸಲಾಗದೆ ನಿಂತಿದೆ.
ಮೊಬೈಲ್ ಸಿಗ್ನಲ್ ಗಳು ಸಹ ದೊರಕದ ಕಾರಣ ಬಸ್ ಪ್ರಯಾಣಿಕರು ಸೇರಿ ಹಲವಾರು ಪ್ರವಾಸಿಗರು ಕಂಗಾಲಾಗಿದ್ದು ತಮ್ಮ ಕುಟುಂಬದವರ ಜತೆ ಸಂಪರ್ಕ ಸಾಧಿಸಲಾಗದೆ ಚಿಂತೆಗೀಡಾಗಿದ್ದಾರೆ.
ವಿದ್ಯುತ್ ಸಂಪರ್ಕವಿಲ್ಲದ ಕಾರಣ ಮೊಬೈಲ್ ಟವರ್ ಗಳು ಸಹ ಸ್ಥಗಿತವಾಗಿದೆ ಎಂದು ಚಿಕ್ಕಮಗಳೂರು ಎಸ್ ಪಿ ಕೆ. ಅಣ್ಣಾಮಲೈ ಹೇಳಿದ್ದಾರೆ.
ವಾಹನಗಳೆಲ್ಲಾ ಸುರಕ್ಷಿತವಾಗಿದ್ದು ಒಮ್ಮೆ ಮಳೆ ಕಡಿಮೆಯಾದ ಬಳಿಕ ಅವರೆಲ್ಲಾ ಗಮ್ಯ ಸ್ಥಾನ ಸೇರಲಿದ್ದಾರೆ” ಅವರು ಹೇಳಿದ್ದಾರೆ. ಶೃಂಗೇರಿ ಪೋಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಇದೇ ವೇಳೆ . ಶೃಂಗೇರಿ ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಜಲಾವೃತವಾಗಿದ್ದು ನದಿ ನೀರು ದೇವಾಲಯದ ಮೆಟ್ಟಿಲ ಸಮೀಪದವರೆಗೆ ತಲುಪಿದೆ.
ಮರಗಳು ಉರುಳಿರುವ ಕಾರಣ ಮಂಗಳೂರು-ಶೃಂಗೇರಿ ಹೆದ್ದಾರಿ ಸಂಚಾರ ಸಹ ಸ್ತಂಬ್ದವಾಗಿದೆ. ಫಲ್ಗುಣಿ ನದಿ ಪ್ರವಾಹದ ಕಾರಣದಿಂದ ವೇಣೂರು, ಮೂಡಬಿದಿರೆ, ಗುರುವಾಯನಕೆರೆ ರಸ್ತೆ ಸಂಚಾರ ಸಹ ಸ್ಥಗಿತವಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿರುವ ತಗ್ಗು ಪ್ರದೇಶಗಳು ನೀರಲ್ಲಿ ಮುಳುಗಡೆಯಾಗಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನ ಶಾಲಾ ಕಾಲೇಜುಗಲಿಗೆ ಗುರುವಾರ ರಜೆ ಘೋಷಿಸಲಾಗಿದೆ.ಮಂಗಳೂರು ನಗರ ಸಹ ಭಾರೀ ಮಳೆಗೆ ಸಾಕ್ಷಿಯಾಗಿದೆ.