EBM News Kannada
Leading News Portal in Kannada

‘ಲಿಪಿ ವಿನ್ಯಾಸ ಕ್ಷೇತ್ರ’ದ ಪರಿಣಿತರು ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೈಜೋಡಿಸಬೇಕು : ಡಾ.ಪುರುಷೋತ್ತಮ ಬಿಳಿಮಲೆ

0


ಬೆಂಗಳೂರು : ಕನ್ನಡ ತಂತ್ರಾಂಶ ಲಿಪಿ ವಿನ್ಯಾಸದಲ್ಲಿ ವೈವಿಧ್ಯತೆ ಇಂದಿನ ಅಗತ್ಯವಾಗಿದ್ದು, ಲಿಪಿ ವಿನ್ಯಾಸ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಣಿತರು ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೈ ಜೋಡಿಸಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕರೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ನಡೆದ ಕನ್ನಡ ಹೊಸ ಲಿಪಿ ಅಭಿವೃದ್ಧಿಪಡಿಸುವ ಕುರಿತಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನ ಸ್ನೇಹಿಯಾದ ಲಿಪಿಗಳ ವಿನ್ಯಾಸದ ಅಭಿವೃದ್ಧಿಯನ್ನು, ತಂತ್ರಾಂಶ ವ್ಯವಸ್ಥೆಯನ್ನು ಪೋಷಿಸುವ ಜವಾಬ್ದಾರಿ ಸರಕಾರದ ಮೇಲಿದ್ದು ಪ್ರಾಧಿಕಾರದ ಈ ಹೊಣೆಗಾರಿಕೆಯನ್ನು ನಿರ್ವಹಿಸಲಿದೆ. ಲಿಪಿಗಳ ವಿನ್ಯಾಸಕ್ಕೆ ಸಂಬಂಧಿಸಿ ಆಧುನಿಕ ಕಾಲಕಾಲಕ್ಕೆ ಹೊಂದಿಕೊಳ್ಳದೇ ಹೋದಲ್ಲಿ ಕನ್ನಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

2017ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಲತಾಣಗಳಲ್ಲಿ ಏಕರೂಪ ಶಿಷ್ಟತೆಯ ವರದಿಯನ್ನು ಸಲ್ಲಿಸಿ ಗಮನಾರ್ಹ ಕೆಲಸ ಮಾಡಿದೆ. ಆಂಗ್ಲಭಾಷೆಯಲ್ಲಿ ಭಾವನೆಗಳನ್ನು ಲಿಪಿಯ ಮೂಲಕ ವ್ಯಕ್ತಪಡಿಸುವ ಅವಕಾಶವಿದ್ದು, ಮೊಬೈಲ್ ತಂತ್ರಾಂಶ, ಕ್ಲೌಡ್ ತಂತ್ರಾಂಶಗಳಲ್ಲಿಯೂ ಹೊಸ ವಿನ್ಯಾಸಗಳ ಕನ್ನಡ ಲಿಪಿ ಬೇಕಿದೆ. ಕನ್ನಡದ ಕೀಲಿಮಣೆಯ ವಿನ್ಯಾಸದಲ್ಲಿಯೂ ಒಂದು ಸಮಾನತೆ ಬೇಕಿದ್ದು, ಸರಕಾರ ಈ ನಿಟ್ಟಿನಲ್ಲಿ ಒಂದು ಸಂಹಿತೆಯನ್ನೇ ರೂಪಿಸಬೇಕಿದೆ. ಈ ಕುರಿತಂತೆ ಸಮಿತಿಯು ಸರಕಾರಕ್ಕೆ ಶೀಘ್ರವೇ ಸಮಗ್ರ ವರದಿ ಸಲ್ಲಿಸಲಿದೆ ಎಂದು ಡಾ. ಬಿಳಿಮಲೆ ಹೇಳಿದರು.

ಸಭೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತರಾದ ಜಿ.ಎನ್.ಮೋಹನ್, ಮಧು ವೈ.ಎನ್, ಮಂಜುನಾಥ ಆರ್. ಆರ್., ಎನ್.ರವಿಕುಮಾರ್ ಮತ್ತು ಡಾ.ಸಂತೋಷ ಹಾನಗಲ್ಲ ಮತ್ತಿತರರು ಹಾಜರಿದ್ದರು.

Leave A Reply

Your email address will not be published.