ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಆದರೆ, ಈ ಬಜೆಟ್ಗೆ ರಾಜ್ಯ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. 2025-26 ಸಾಲಿನ ಬಜೆಟ್ ನಿರಾಶದಾಯಕ, ಆರ್ಥಿಕತೆ ಬೆಳವಣಿಗೆಗೆ ಪೂರಕವಲ್ಲದ, ದೂರದೃಷ್ಟಿ ಇಲ್ಲದ, ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿರುವ ಬಜೆಟ್ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ, ಇತ್ತ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಬಜೆಟನ್ನು ʼಸ್ಫೂರ್ತಿದಾಯಕ ಬಜೆಟ್ʼ ಎಂದು ಕೊಂಡಾಡಿದ್ದಾರೆ.
3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರಕ್ಕೆ ಸ್ಫೂರ್ತಿದಾಯಕ ಬಜೆಟ್ : ಕೇಂದ್ರ ಸಚಿವ ಜೋಶಿ ಬಣ್ಣನೆ
ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟವಾಗುವ ಧ್ಯೇಯಕ್ಕೆ ಅತ್ಯಂತ ಸ್ಫೂರ್ತಿದಾಯಕ ಬಜೆಟ್ ಇದಾಗಿದೆ. ದೇಶದ ಆರ್ಥಿಕ ಪ್ರಗತಿಯ ಮುನ್ನೋಟಕ್ಕೆ ಆಶಾದಾಯಕ ಬಜೆಟ್ ಆಗಿದೆ. . ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ದೇಶದ ಬಡ ಮತ್ತು ಮಧ್ಯಮ ವರ್ಗಗಳವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಪೂರಕವಾಗಿ ಪ್ರಸಕ್ತ ಸಾಲಿನ ಮುಂಗಡ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದುಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ, ನಾಯಕತ್ವ ಮತ್ತು ದೂರದೃಷ್ಟಿಯಿಂದಾಗಿ ಭಾರತ ಆರ್ಥಿಕವಾಗಿ ಬಹು ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ. ಎನ್‌ಡಿಎ ಸರ್ಕಾರ, ತನ್ನ ಮೂರನೇ ಅವಧಿಯಲ್ಲಿ ಬಡ ಮತ್ತು ಮಧ್ಯಮ ವರ್ಗಗಳವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿರಿಸಿ ಅಭೂತಪೂರ್ವ ಬಜೆಟ್ ಅನ್ನು ಪ್ರಸ್ತುತಪಡಿಸಿದೆ. ಕೇಂದ್ರದ ಈ ಬಜೆಟ್ ಸಮೃದ್ಧ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಮುನ್ನಡೆ ಸಾಧಿಸುತ್ತಿರುವ ಭಾರತಕ್ಕೆ ಮತ್ತಷ್ಟು ಸುಭದ್ರ ಅಡಿಪಾಯ ಹಾಕಿದೆ. ಆರ್ಥಿಕತೆ ಮತ್ತು ಹೂಡಿಕೆಯಲ್ಲಿ ಗಣನೀಯ ಪ್ರಗತಿಗೆ ದಿಕ್ಸೂಚಿಯಂತಿದೆ ಎಂದು ಅವರು ಹೇಳಿದ್ದಾರೆ.
2024-25ನೇ ಆರ್ಥಿಕ ವರ್ಷದ ಪ್ರಸಕ್ತ ಬಜೆಟ್ ನಲ್ಲಿ ಮಧ್ಯಮ ವರ್ಗ, ಉದ್ಯಮ, ಕೃಷಿ, ಮೆಡಿಕಲ್ ಹೀಗೆ ಸರ್ವ ಕ್ಷೇತ್ರಕ್ಕೂ ಬಂಪರ್ ಕೊಡುಗೆ ನೀಡಲಾಗಿದೆ. ಇದೊಂದು ಜನರ ನಿರೀಕ್ಷೆಯನ್ನೂ ಮೀರಿದ ಅಭೂತಪೂರ್ವ ಬಜೆಟ್ ಆಗಿದೆ. ಪ್ರಮುಖವಾಗಿ 12 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ವಿನಾಯಿತಿ ಕಲ್ಪಿಸುವ ಮೂಲಕ ಮಧ್ಯಮ ವರ್ಗಕ್ಕೆ ಬಿಗ್ ಗಿಫ್ಟ್ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿ ರೈತ ವರ್ಗಕ್ಕೆ ಆಶಾದಾಯಕವಾಗಿದೆ ಎಂದು ತಿಳಿಸಿದರು.
ʼವಿಕಸಿತ ಭಾರತʼ ಗುರಿ ತಲುಪಲು ಪೂರಕವಾದ ಬಜೆಟ್ : ಬೊಮ್ಮಾಯಿ
ಕೇಂದ್ರದ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದು, ಇದರಿಂದ ಮಧ್ಯಮ ವರ್ಗದವರ ಉಳಿತಾಯ ಹೆಚ್ಚಲಿದೆ. ಇದೊಂದು ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಂಡಿರುವ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರದ ಬಜೆಟ್ ಮಂಡನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ದೂರದೃಷ್ಟಿಯ ವಿಕಸಿತ ಭಾರತ 2047ರ ಅಡಿಗೆ ತೆಗೆದುಕೊಂಡು ಹೋಗುವ ಅಭಿವೃದ್ಧಿ ಪರವಾಗಿರುವ ಬಜೆಟ್. ಆತ್ಮನಿರ್ಭರ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಪೂರಕವಾದ ಬಜೆಟ್ ಆಗಿದೆ. ಮಧ್ಯಮವರ್ಗದ ಜನರ ನಿರೀಕ್ಷೆಗಳಿಗೆ ಬೂಸ್ಟ್ ನೀಡಿದೆ. ಮದ್ಯಮ ವರ್ಗದ ಉಳಿತಾಯ ಹೆಚ್ಚಿಸಿದೆ. ಇದೊಂದು ಮಧ್ಯಮ ವರ್ಗದವರಿಗೆ ಸರ್ಪ್ರೈಸ್. ಎಲ್ಲರೂ 10 ಲಕ್ಷ ತೆರಿಗೆ ವಿನಾಯಿತಿ ನಿರೀಕ್ಷೆ ಮಾಡಿದ್ದರು. ಆದರೆ, ಪಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿ ಸರ್ಪ್ರೈಸ್ ನೀಡಿದ್ದಾರೆ ಎಂದರು.
ಅಭಿವೃದ್ಧಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಬಡವರು. ರೈತರು, ಮಹಿಳೆಯರು, ಯುವಕರು, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ದುಡಿಯುವ ಕೈಗಳಿಗೆ ವಿಪುಲವಾದಂತ ಅವಕಾಶ ಕೊಟ್ಟಿರುವ ಬಜೆಟ್ ಎಂದು ತಿಳಿಸಿದರು.
ಆರ್ಥಿಕತೆಗೆ ಒತ್ತು ನೀಡುವ ಬಜೆಟ್ : ವಿ.ಸೋಮಣ್ಣ
ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದು, ಇದು ಆರ್ಥಿಕತೆಗೆ ಒತ್ತು ನೀಡುವ ಬಜೆಟ್. ರಸಗೊಬ್ಬರಕ್ಕೆ ಕೊರತೆಯಾಗಂತೆ ಯೋಜನೆ ರೂಪಿಸಲಾಗಿದೆ. ಜಲಜೀವನ್ ಮಿಷನ್ನಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ. ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 2.60 ಲಕ್ಷ ಕೋಟಿ ಮೀಸಲಿಡಲಾಗಿದೆ. ರೈಲ್ವೆ ಸುರಕ್ಷತೆಗೆ ಹೆಚ್ಚಿನ ಹಣ ಮೀಸಲಾಡಲಾಗಿದೆ ಎಂದರು.
ಕರ್ನಾಟಕಕ್ಕೆ ಕಳೆದ ವರ್ಷ 7,559 ಕೋಟಿ ರೂ ಮೀಸಲಾಡಲಾಗಿತ್ತು. ಈ ಬಾರಿ 7,564 ಕೋಟಿ ರೂ. ಮೀಸಲಿಡಲಾಗಿದೆ. ಸಬ್ ಅರ್ಬನ್ ರೈಲಿಗೆ ಈ ಬಾರಿಯೂ 350 ಕೋಟಿ ರೂ. ನೀಡಲಾಗಿದೆ. ಕಾಂಗ್ರೆಸ್ನವರ ಅವಧಿಯಲ್ಲಿ ಏನು ಮಾಡಿದ್ದಾರೆ ಅನ್ನೋದನ್ನು ಹೇಳಲಿ ಎಂದು ಒತ್ತಾಯಿಸಿದ್ದಾರೆ.
ಮಧ್ಯಮ ವರ್ಗಕ್ಕೆ ಬಂಪರ್ ಉಡುಗೊರೆ ನೀಡಿದ ಕೇಂದ್ರ : ಆರ್.ಅಶೋಕ್
ಯುಪಿಎ ಅವಧಿಯಲ್ಲಿ ಅನಗತ್ಯ ವೆಚ್ಚ ಹಾಗೂ ಲೂಟಿಯಿಂದಾಗಿ ಅಧಿಕ ಗಾತ್ರದ ಬಜೆಟ್ ಮಂಡಿಸಲು ಸಾಧ್ಯವಾಗುತ್ತಿರಲಿಲ್ಲ. ಅವುಗಳಿಗೆ ಕಡಿವಾಣ ಹಾಕಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಅತ್ಯಧಿಕ ಗಾತ್ರದ ಬಜೆಟ್ ಮಂಡಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013-14 ರ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಬಜೆಟ್ ಗಾತ್ರ 16,65,297 ಕೋಟಿ ರೂ. ಆಗಿತ್ತು. 2025-26 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 50,65,345 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದೆ. ಲೂಟಿಯಾಗುತ್ತಿದ್ದ ಹಣವನ್ನು ಮರಳಿ ತಂದಿದ್ದರಿಂದ ಬಜೆಟ್ ಗಾತ್ರ ಹೆಚ್ಚಾಗಿದೆ. ಹಿಂದೆ 11,09,997 ಕೋಟಿ ರೂ. ಯೋಜನೇತರ ವೆಚ್ಚವಾಗಿದ್ದರೆ, ಈಗ ಅದು 39,44,255 ಕೋಟಿ ರೂ. ಗೆ ಏರಿದೆ. ಬಂಡವಾಳ ವೆಚ್ಚ ಆಗ 2,29,129 ಕೋಟಿ ರೂ. (13.7%) ಆಗಿದ್ದು, ಈಗ 11,21,090 ಕೋಟಿ ರೂ. ಆಗಿದೆ. ಅಂದರೆ ಬಂಡವಾಳ ವೆಚ್ಚ 9 ಲಕ್ಷ ಕೋಟಿ ರೂ. (22.13%) ಏರಿಕೆ ಕಂಡಿದೆ. ಅಂದರೆ ತೆರಿಗೆ ಸೋರಿಕೆ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ ಎಂದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಸಿಗುವ ಸಾಲದ ಮಿತಿಯನ್ನು 3 ಲಕ್ಷ ರೂನಿಂದ 5 ಲಕ್ಷ ರೂ. ಗೆ ಏರಿಸಲಾಗಿದೆ. ಸ್ಟಾರ್ಟ್‌ಅಪ್ ಕಂಪನಿಗಳಿಗೆ 10 ಕೋಟಿ ರೂ.ನಿಂದ 20 ಕೋಟಿ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಮೊದಲ ಬಾರಿ ಉದ್ಯಮ ಆರಂಭಿಸುವ ಎಸ್‌ಸಿ, ಎಸ್‌ಟಿ ವರ್ಗದ 5 ಲಕ್ಷ ಮಹಿಳೆಯರಿಗೆ ಹೊಸ ಯೋಜನೆಯಡಿ ಟರ್ಮ್‌ಲೋನ್ ನೀಡಲಾಗುತ್ತದೆ ಎಂದರು.
ಮಧ್ಯಮ ವರ್ಗಕ್ಕೆ ಬಂಪರ್ ಉಡುಗೊರೆ ನೀಡಲಾಗಿದೆ. 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಜನರಿಗೆ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಗಾಳಿ ಒಂದನ್ನು ಬಿಟ್ಟು ಎಲ್ಲಕ್ಕೂ ತೆರಿಗೆ ವಿಧಿಸಿದ್ದಾರೆ. ಮೋದಿ ಸರ್ಕಾರ ಯಾವುದೇ ತೆರಿಗೆಯನ್ನು ಹೇರಿಲ್ಲ ಎಂದರು.
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರ ಆರಂಭಿಸುವ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಲಾಗಿದೆ. ಕ್ಯಾನ್ಸರ್ ಸೇರಿದಂತೆ 36 ಜೀವ ರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಿಸಲಾಗುತ್ತದೆ. ಟಿವಿ, ಸ್ವದೇಶಿ ಉಡುಪು, ಚರ್ಮ ಉತ್ಪನ್ನಗಳ ದರ ಇಳಿಕೆಯಾಗಲಿದೆ ಎಂದರು.