ಚಿಕ್ಕಮಗಳೂರು: ಕಳೆದ ಒಂದೂವರೆ ದಶಕದಿಂದ ಭೂಗತನಾಗಿದ್ದು, ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದ ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದ ರವೀಂದ್ರ ಇಂದು ಮುಖ್ಯವಾಹಿನಿಗೆ ಬಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಶನಿವಾರ ಮಧ್ಯಾಹ್ನ ನಾಗರಿಕ ಶಾಂತಿಗಾಗಿ ವೇದಿಕೆಯ ಸದಸ್ಯರ ಜೊತೆ ಆಗಮಿಸಿದ ರವೀಂದ್ರ ನಕ್ಸಲ್ ಪುರ್ನವಸತಿ ಮತ್ತು ಶರಣಾಗತಿ ಸಮಿತಿ ಜಿಲ್ಲಾ ಅಧ್ಯಕ್ಷೆಯೂ ಆಗಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್, ಶರಣಾಗತಿ ಸಮಿತಿಯ ಸದಸ್ಯ ಕೆ.ಪಿ.ಶ್ರೀಪಾಲ್, ನೂರ್ ಶ್ರೀಧರ್ ಸೇರಿದಂತೆ ಇತರರ ಮುಂದೆ ರವೀಂದ್ರ ಶರಣಾಗಿದ್ದಾರೆ.
“ನಾನು ಸ್ವ ಇಚ್ಚೆಯಿಂದ ಸಮಾಜದ ಮುಖ್ಯವಾಹಿನಿಗೆ ಬಂದಿದ್ದೇನೆ. ಯಾರ ಒತ್ತಡದಿಂದ ಬಂದಿಲ್ಲ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ರವೀಂದ್ರ ಮನವಿ ಮಾಡಿದ್ದಾರೆ.
ಕಳೆದ ಒಂದೂವರೆ ದಶಕದಿಂದ ಭೂಗತನಾಗಿದ್ದ ರವೀಂದ್ರ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ವಿರುದ್ಧ ಜಿಲ್ಲೆಯಲ್ಲಿ ಮೇಲೆ 14 ಕೇಸ್ ಗಳಿವೆ ಎಂದು ತಿಳಿದುಬಂದಿದೆ.
ಕಳೆದ ಜ.8ರಂದು ಎಂಟು ಮಂದಿ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ರ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸಿದ ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿಯು ಮುಖ್ಯವಾಹಿನಿಗೆ ಬರುವಂತೆ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದೆ.