ಬೆಂಗಳೂರು : ನಿರುದ್ಯೋಗಿ ಕನ್ನಡಿಗರ ಅನುಕೂಲಕ್ಕಾಗಿ ಸರಕಾರದಿಂದಲೇ ಉದ್ಯೋಗ ಪೋರ್ಟಲ್ ಸೃಜನೆ ಮಾಡುವ ಸಂಬಂಧ ಆಯ-ವ್ಯಯದಲ್ಲಿ ಘೋಷಣೆ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಗುರುವಾರ ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ‘ಕುಶಲ ಕನ್ನಡಿಗ’ ಯೋಜನೆ ಅಡಿಯಲ್ಲಿ ಪ್ರತಿಭಾವಂತ ನಿರುದ್ಯೋಗಿ ಕನ್ನಡಿಗರು ತಮ್ಮ ಸ್ವ-ವಿವರಗಳನ್ನು ದಾಖಲಿಸಲು ಸರಕಾರವು ಪೋರ್ಟಲ್ ಸೃಜನೆಗೆ ಮುಂದಾದಲ್ಲಿ ಉದ್ಯೋಗದಾತ ಸಂಸ್ಥೆಗಳು ಅರ್ಹ ಅಭ್ಯರ್ಥಿಗಳನ್ನು ನೇರವಾಗಿ ಸಂಪರ್ಕಿಸಲು ಅನುಕೂಲವಾಗಲಿದೆ. ಇದರಿಂದ ಉದ್ದಿಮೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಹೆಚ್ಚಲಿದ್ದು, ಕನ್ನಡಿಗರ ನಿರುದ್ಯೋಗದ ಬವಣೆ ಕಡಿಮೆಯಾಗಲಿದೆ. ಈ ಹಿಂದೆ ಎಂಪ್ಲಾಯ್‍ಮೆಂಟ್ ನ್ಯೂಸ್ ಎಂಬ ಪತ್ರಿಕೆ ಬರುತ್ತಿದ್ದು, ಈಗ ಅದು ನಿಂತು ಹೋಗಿದೆ. ಕಾರಣ ಈ ಪೋರ್ಟಲ್ ಅತ್ಯವಶ್ಯ ಎಂದು ಭಾವಿಸಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯದ ಬಹುಪಾಲು ಸರಕಾರಿ ಶಾಲೆಗಳ ಆಸ್ತಿಗಳು ಆಯಾ ಶಾಲೆಗಳ ಹೆಸರಿನಲ್ಲಿ ಇಲ್ಲದಿರುವ ಕಾರಣ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಳ್ಳುತ್ತಿರುವ ಹಲವಾರು ಪ್ರಕರಣಗಳು ವರದಿಯಾಗುತ್ತಿವೆ. ಸರಕಾರಿ ಶಾಲೆಗಳು ಉಳಿದರೆ ಕನ್ನಡ ಉಳಿಯುವ ದಿನಮಾನದಲ್ಲಿರುವ ನಾವುಗಳು ಸರಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ವಿಶೇಷ ಗಮನ ಹರಿಸಬೇಕಿದೆ ಎಂದು ಡಾ.ಬಿಳಿಮಲೆ ತಿಳಿಸಿದ್ದಾರೆ.
ಸರಕಾರಿ ಶಾಲೆಗಳ ಗಡಿ ರೇಖೆಗಳನ್ನು ಸ್ಪಷ್ಟವಾಗಿ ಗುರುತಿಸಿ ಒತ್ತುವರಿಯನ್ನು ತೆರವುಗೊಳಿಸಲು ವಿಶೇಷ ಅಭಿಯಾನ ರೂಪಿಸುವ ಯೋಜನೆಯನ್ನು ಸಹ ಆಯ-ವ್ಯಯದಲ್ಲಿ ಘೋಷಿಸಬೇಕು ಎಂದು ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮೂರು ಸಾವಿರ ಶತಮಾನ ಕಂಡ ಸರಕಾರಿ ಶಾಲೆಗಳಿದ್ದು, ಈಗಾಗಲೇ ಹಲವು ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಿರುವುದು, ಮಕ್ಕಳ ಸಂಖ್ಯೆ ಇಲ್ಲದ ಶಾಲೆಗಳನ್ನು ವಿಲೀನಗೊಳಿಸುವ ಪ್ರಯತ್ನಕ್ಕೆ ಮುಂದಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಡಾ.ಬಿಳಿಮಲೆ ತಿಳಿಸಿದ್ದಾರೆ.
ಪಾರಂಪರಿಕ ಇತಿಹಾಸವನ್ನು ಹೊಂದಿರುವ ಇಂತಹ ಶಾಲೆಗಳನ್ನು ಉಳಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಸರಕಾರ ಈ ನಿಟ್ಟಿನಲ್ಲಿ ವಿಶೇಷ ಕ್ರಮಕ್ಕೆ ಮುಂದಾಗಬೇಕಿದ್ದು, ಇಂತಹ ಶಾಲೆಗಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಕಾಯಕಲ್ಪವನ್ನು ನೀಡುವ ಕುರಿತಂತೆಯೂ ಈ ಸಾಲಿನ ಆಯ-ವ್ಯಯದಲ್ಲಿ ಘೋಷಿಸಬೇಕು ಎಂದು ಡಾ.ಬಿಳಿಮಲೆ ಆಗ್ರಹಿಸಿದ್ದಾರೆ.
‘ಮಾದರಿ ಶಾಲೆ’ಗಳಾಗಿ ಅಭಿವೃದ್ಧಿಗೊಳಿಸಿʼ: ಶತಮಾನ ಕಂಡ ಶಾಲೆಗಳ ಶೈಕ್ಷಣಿಕ ಕಾರ್ಯಕ್ರಮದಡಿ ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ವಿಶೇಷ ತರಬೇತಿ, ವಿದ್ಯಾರ್ಥಿಗಳ ಕಲಿಕೆಗೆ ವಿಶೇಷ ಕಲಿಕಾ ಪರಿಕರಗಳು, ಸದೃಢ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳನ್ನು ಪೋಷಿಸುವುದಲ್ಲದೇ ಉತ್ತಮ ಮೂಲ ಸೌಕರ್ಯಗಳನ್ನು ಕಲ್ಪಿಸುವ ಯೋಜನೆ ರೂಪಿಸಿ ಅವುಗಳನ್ನು ‘ಮಾದರಿ ಶಾಲೆ’ಗಳಾಗಿ ಅಭಿವೃದ್ಧಿಗೊಳಿಸಬೇಕು ಎಂದು ಡಾ.ಬಿಳಿಮಲೆ ಹೇಳಿದ್ದಾರೆ.