ಬೆಂಗಳೂರು : ಮುಡಾದ ಮಾಜಿ ಆಯುಕ್ತರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ(ಈಡಿ) ನಡೆಸಿರುವ ಶೋಧ ಹಾಗೂ ವಶ ಕಾನೂನುಬಾಹಿರ, ಕಾನೂನು ವಿಧಿವಿಧಾನಗಳ ದುರ್ಬಳಕೆ ಎಂದು ಬುಧವಾರ ಹೈಕೋರ್ಟ್ ಕಿಡಿಕಾರಿದೆ.
ಇದರೊಂದಿಗೆ, ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲೂ ಮುಡಾ ಮಾಜಿ ಆಯುಕ್ತರಿಗೆ ಹೈಕೋರ್ಟ್ ಅನುಮತಿ ನೀಡಿತು. ಈ ಪ್ರಕರಣವು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಬಿ.ಎಂ. ಅವರಿಗೆ ಅಕ್ರಮವಾಗಿ ನಿವೇಶನವನ್ನು ಮಂಜೂರು ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದೆ.
ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ನಿಭಾಯಿಸುವ ಪ್ರಮುಖ ತನಿಖಾ ಸಂಸ್ಥೆಯಾಗಿರುವುರಿಂದ ತನ್ನ ತನಿಖೆಯ ಸಂದರ್ಭದಲ್ಲಿ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ನ್ಯಾ. ಹೇಮಂತ್ ಚಂದನ್ ಗೌಡರ್ ಆದೇಶಿಸಿದರು. ಸಂವಿಧಾನದ 21 ವಿಧಿಯಡಿ ಕೊಡಮಾಡಲಾಗಿರುವ ಸ್ವಾತಂತ್ರ್ಯ ಹಾಗೂ ಖಾಸಗಿತನದ ಮೂಲಭೂತ ಹಕ್ಕುಗಳನ್ನು ಈ ದಾಳಿಗಳು ಉಲ್ಲಂಘಿಸಿವೆ ಎಂದು ಅವರು ಅಭಿಪ್ರಾಯ ಪಟ್ಟರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಕಾಯ್ದೆಯ ಸೆಕ್ಷನ್ 3 ಅನ್ನು ಹೇರಲು, ಆಧಾರರಹಿತ ಶೋಧ ಹಾಗೂ ಕಾನೂನು ವಿಧಿವಿಧಾನಗಳ ಉಲ್ಲಂಘನೆ ಮಾಡಲು ಜಾರಿ ನಿರ್ದೇಶನಾಲಯದ ಬಳಿ ಯಾವುದೇ ಮೇಲ್ನೋಟದ ಸಾಕ್ಷ್ಯಾಧಾರಗಳಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
“ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಲ್ಲಿ ನಿರ್ಮಿಸಲಾಗಿರುವ ವೈಧಾನಿಕ ನ್ಯಾಯಪರತೆಯನ್ನು ಜಾರಿ ನಿರ್ದೇಶನಾಲಯ ಅಗೌರವಿಸಲು ಸಾಧ್ಯವಿಲ್ಲ. ಸೂಕ್ತ ಪ್ರಕ್ರಿಯೆಗಳಿಲ್ಲದೆ ನಾಗರಿಕ ಸ್ವಾತಂತ್ರ್ಯದೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.